ನಾಡೋಜ ಸುಕ್ರಿ ಬೊಮ್ಮ ಗೌಡ ಅಥವಾ ಸುಕ್ರಜ್ಜಿ ಓರ್ವ ಪದ್ಮಶ್ರೀ ಪುರಸ್ಕ್ರತ ಜಾನಪದ ಗಾಯಕಿ. ಸುಕ್ರಜ್ಜಿಗೆ ಸುಮಾರು ೫೦೦೦ ಹಾಲಕ್ಕಿ ಹಾಡುಗಳು ಕಂಠಪಾಟವಾಗಿವೆ ಮತ್ತು ಅವುಗಳಲ್ಲಿ ಹಲವು ನೂರು ವರ್ಷಕ್ಕಿಂತಲೂ ಹಳೆಯದಾಗಿದೆ. ಕರ್ನಾಟಕ ಜಾನಪದ ಅಕಾಡೆಮಿ ಸುಕ್ರಜ್ಜಿಯವರ ಹಾಡುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿಟ್ಟಿದೆ. ಅಲ್ಲದೇ ಕಾರವಾರದಲ್ಲಿನ ಅಖಿಲ ಭಾರತ ರೇಡಿಯೋ ಕೂಡಾ ಅವರ ಹಾಡುಗಳನ್ನು ಧ್ವನಿಮುದ್ರಣ ಮಾಡಿದೆ ಮತ್ತು ಅವುಗಳನ್ನು ಅದರ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ. == ಜೀವನ == ಅಂಕೋಲಾ ತಾಲ್ಲೂಕಿನ ಸಿರಕುಳಿಯ ದೇವಿ ಮತ್ತು ಸುಬ್ಬ ಎಂಬ ದಂಪತಿಗೆ ನಾಲ್ಕು ಗಂಡು ಮತ್ತು ೨ ಹೆಣ್ಣು ಮಕ್ಕಳು. ಇವರಲ್ಲಿ ನಾಲ್ಕನೇಯವರಾದ ಸುಕ್ರಜ್ಜಿ ೧೯೪೨ರಲ್ಲಿ ಜನಿಸಿದರು. ಸುಕ್ರಜ್ಜಿಗೆ ೧೨ ವರ್ಷ ವಯಸ್ಸಿನಲ್ಲಿದ್ದಾಗ ೪೦ ವರ್ಷದ ಬಡಗೇರಿಯ ಬೊಮ್ಮ ಗೌಡರ ಜೊತೆ ವಿವಾಹವಾಯಿತು. ೧೯೮೦ ರ ದಶಕದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ತಜ್ಞ ಮತ್ತು ಮಾಜಿ ಉಪಕುಲಪತಿ ಎಚ್. ಸಿ. ಬೋರಲಿಂಗಯ್ಯ ಅವರು ಬಡಗೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ, ಅವರ ಪ್ರತಿಭೆಯನ್ನು ಗಮನಿಸಿ ಧಾರವಾಡ ಆಕಾಶವಾಣಿ ಕೇಂದ್ರದ ಬನಂದೂರು ಕೆಂಪಯ್ಯರಿಗೆ ತಿಳಿಸಿದರು. ಹೀಗೆ ಹಾಲಕ್ಕಿ ಸಮುದಾಯದ ಕೋಗಿಲೆಯ ಸಂಗೀತದ ಜೀವನವು ಪ್ರಾರಂಭವಾಯಿತು. == ತಾರ್ಲೆ ಕಲಾತಂಡ == ಸುಕ್ರಜ್ಜಿಯ ತಾರ್ಲೆ ಕುಣಿತ ಪ್ರದರ್ಶನಕ್ಕೆ ೨-೩ ದಶಕಗಳ ಕಾಲ ಹೆಗಲು ಕೊಟ್ಟು, ಸಾಕ್ಷರತಾ ಆಂದೋಲನ, ಸಾರಾಯಿ ನಿಷೇಧ ಆಂದೋಲನ, ಉಳುವವನೇ ಹೊಲದೊಡೆಯ, ಪರಿಶಿಷ್ಟ ಜಾತಿ ಗುರುತಿಸುವಿಕೆಯಂತಹ ಚಳವಳಿಗಳಿಗಾಗಿ, ದಿಲ್ಲಿ, ಕೇರಳ, ಕನ್ಯಾಕುಮಾರಿ, ಬೆಂಗಳೂರು, ಮೈಸೂರು, ಬೆಳಗಾಂವ ಸೇರಿದಂತೆ ದೇಶಾದ್ಯಂತ ಸಂಚರಿದವರು ೧೦-೨೦ ಮಹಿಳೆಯರ ಗುಂಪು. ಕಲಾತಂಡದ ಕಲಾವಿದೆಯರು: ಪಾರ್ವತಿ ಹೊಸಬು ಗೌಡ, ದೇವಿ ತೋಕು ಗೌಡ, ಸುಮಿತ್ರಾ ಸುರೇಶ ಗೌಡ, ನುಗ್ಗಿ ಗಣೇಶ ಗೌಡ, ಸಣ್ಣು ಲಿಂಗಾ ಗೌಡ, ಕುಚಲಿ ಮಾಣಿ ಗೌಡ, ನೀಲಮ್ಮ ಬೇಡು ಗೌಡ, ಸುಶೀಲ ಬೀರ ತಂದೆ ಸುಕ್ತು ಗೌಡ, ಗೌರಿ ಅನಂತ ಗೌಡ, ಸೋಮಿ ಮಂಗು ಗೌಡ, ನಾಗಮ್ಮ ಸುಕ್ತು ಗೌಡ, ಕೊಯ್ದು ಮನೆ ತಾಯಿ ಗಂಗೆ ಸಣ್ಣು ಬುದ್ದು ಗೌಡ, ಲಲಿತ ಬೀಮ ಗೌಡ, ಸೋಮು ಸೋಮು ಗೌಡ, ಆಯಿ ಕರಿಯಾ ಗೌಡ ಮತ್ತು ಚೋಮಿ ಹನಮಾಗೌಡ. == ಮದ್ಯಪಾನ ವಿರೋಧಿ ಆಂದೋಲನ == ಕುಡಿತದ ವ್ಯಸನದಿಂದ ಸಂಭವಿಸಿದ ಗಂಡನ ಸಾವಿನಿಂದ ಧೃತಿಗೆಡದ ಸುಕ್ರಜ್ಜಿಯು ೧೯೯೦ರ ದಶಕದಲ್ಲಿ ಮದ್ಯ ವಿರೋಧಿ ಆಂದೋಲನವನ್ನು ನಡೆಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ, ಹೊನ್ನಾವರದ ಡಾ. ಕುಸುಮ ನೇತೃತ್ವದಲ್ಲಿ ನವಸಾಕ್ಷರ ಮಹಿಳೆಯರು ಕಾನೂನುಬದ್ದ ಮದ್ಯಪಾನ ವಿರೋಧಿ ಚಳವಳಿ ನಡೆಯಿತು. ಆಗ ಅಮ್ಮಾಬಾಯಿ, ಕರಿಯಮ್ಮ ಭುವನೇಶ್ವರಿ ಅಳಗೋಡ ಮತ್ತು ಕುಸುಮ ಮುಂತಾದವರನ್ನು ಕಾರವಾರದ ಜೈಲಿಗೆ ಹಾಕಲಾಗಿತ್ತು. ಅವರ ಬೆಂಬಲಕ್ಕೆ ಸುಕ್ರಿ ನೇತೃತ್ವದಲ್ಲಿ ಬಡಗೇರಿಯ ಹಾಲಕ್ಕಿ ಒಕ್ಕಲತಿಯರ ತಾರ್ಲೆ ಕಲಾತಂಡವು ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ಧಾವಿಸಿತು. ಕುಮಟಾ, ಸಿರ್ಸಿ, ಸಿದ್ಧಾಪುರ, ಕಾರವಾರ ಪಟ್ಟಣಗಳಲ್ಲಲ್ಲದೇ, ಹಲವು ಹಳ್ಳಿಗಳಲ್ಲಿಯೂ ನಡೆದ ಚಳುವಳಿಗಳಿಗೆ ಇವರ ತಾರ್ಲೆ ಕಲಾತಂಡ ಮುಂಚೂಣಿಯಲ್ಲಿ ನಿಂತು ಹುರಿದುಂಬಿಸುತ್ತಿದ್ದರು. ಬೆಳಗಾಂವನ ಡಿ. ಸಿ. ಯವರಿಗೂ ಅರ್ಜಿ ನೀಡಿದರು. ಈ ಆಂದೋಲನವು ಹಳ್ಳಿಯ ಸ್ಥಳೀಯ ಸಾರಾಯಿ ಮಳಿಗೆಗಳ ಮುಚ್ಚುವಿಕೆಗೆ ಕಾರಣವಾಯಿತು. == ಪ್ರಶಸ್ತಿಗಳು == == ಉಲ್ಲೇಖ ==