== ಒಳ್ಳೆಯ ಮಾತು == ಮೌಢ್ಯ ತೊರೆದು, ಜ್ಞಾನವಂತನಾಗು. ಜಾತಿ ತೊರೆದು, ನೀತಿವಂತನಾಗು. ಅಹಂಕಾರ ತೊರೆದು, ಗುಣವಂತನಾಗು. ಆಗಲೇ ನೀನು ಉತ್ತಮ-ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ. ~ ಬಸವ ವಿನಯ್(ವಿಪಿ) ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ (ಸು:ಚೆನ್ನಾಗಿ, ಭಾಷಿತ:ಹೇಳಿದ್ದು). ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ. ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ. ಸುಭಾಷಿತಗಳ ಬಗ್ಗೆ ‘ಸುಭಾಷಿತರತ್ನಭಾಂಡಾಗಾರ’ದ ಮಾತೊಂದು ಹೀಗಿದೆ: ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ । ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಮ್‌ ।। ಭಾಷೆಯ ಬಗ್ಗೆ ಒಂದು ಸುಭಾಷಿತ; ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತಭಾಷೆ; ಅದರಿಂದಾಗಿ ಆ ಭಾಷೆಯಲ್ಲಿರುವ ಕಾವ್ಯ ಮಧರವಾಗಿದೆ; ಅದಕ್ಕಿಂತಲೂ ಸುಭಾಷಿತ ಇನ್ನೂ ಮಧುರ’ ಎನ್ನುವುದು ಈ ಶ್ಲೋಕದ ಭಾವ. ನಮ್ಮ ಜೀವನವು ಮಾತನ್ನು ಆವಲಂಬಿಸಿಕೊಂಡಿದೆ; ನಮ್ಮ ಜೀವನ ಮಾತಿಲ್ಲದೆ ನಡೆಯದು. ನಮ್ಮ ಜೀವನದ ಸೊಗಸಿಗೂ, ಸುಖಕ್ಕೂ, ನೋವಿಗೂ ನಾವಾಡುವ ಮಾತು ಕಾರಣವಾಗಿರುತ್ತದೆ. == ಸುಭಾಷಿತದ ವ್ಯಾಖ್ಯೆ == ನಾವಾಡುವ ಮಾತು ನಮ್ಮ ಬದುಕಿಗೆ ಪೂರಕವಾಗಿ ಒದಗಬೇಕು; ಬದುಕಿನ ಆಳವನ್ನೂ ವಿಸ್ತಾರವನ್ನೂ ಅದು ತೋರಿಸುವಂತಿರಬೇಕು; ನಮ್ಮ ಹಿತವನ್ನೂ ಅಹಿತವನ್ನೂ ಪ್ರಕಟಿಸುವಂತಿರಬೇಕು; ಇಷ್ಟೆಲ್ಲ ಇದ್ದರೂ ಆ ಮಾತು ಕೇಳಲು ಸಿಹಿಯಾಗಿರಲೂ ಬೇಕು. ಇಷ್ಟು ಗುಣಗಳನ್ನೂ ಒಳಗೊಂಡಿರುವುದೇ ‘ಸುಭಾಷಿತ’. ಇದನ್ನೇ ಸುಭಾಷಿತವೊಂದು ತನ್ನ ಬಗ್ಗೆ ತಾನೇ ಹೀಗೆ ಹೇಳಿಕೊಂಡಿದೆ: ದ್ರಾಕ್ಷಾಮ್ಲಾನಾಮುಖೀ ಜಾತಾ ಶರ್ಕಾರಾ ಚಾಶ್ಮತಾಂ ಗತಾ/ ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ// "ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯೂ ಬಾಡಿಹೋಯಿತು(ಸಪ್ಪೆಯಾಯಿತು); ಸಕ್ಕರೆ ಕಲ್ಲಾಗಿಹೋಯಿತು (ರುಚಿಇಲ್ಲದ್ದು). ಅಮೃತವು ಹೆದರಿ ಸ್ವರ್ಗಕ್ಕೆ ಓಡಿಹೋಯಿತು!’ == ಸುಭಾಷಿತದ ಶ್ರೇಷ್ಠತೆ == ಸುಭಾಷಿತಗಳ ಸಂಗ್ರಹದಿಂದ ನಮ್ಮ ಜೀವನದೃಷ್ಟಿ ವಿಶಾಲವಾಗುವುದು; ಜೀವನದ ಎಷ್ಟೋ ಸಂದರ್ಭಗಳ ಗುಣಾವಗುಣಗಳನ್ನು ಸ್ಪಷ್ಟವಾಗಿ ವಿಮರ್ಶಿಸಲು ನೆರವಾಗುತ್ತವೆ; ಅದನ್ನೇ ಸುಭಾಷಿತವೊಂದು ಹೀಗೆಂದಿದೆ: ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ/ ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ// ‘ಭೂಮಿಯಲ್ಲಿ ಶ್ರೇಷ್ಠವಸ್ತುಗಳೆಂದರೆ ಕೇವಲ ಮೂರು: ನೀರು, ಅನ್ನ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ‘‘ರತ್ನ ’’ಎಂದು ಕರೆಯುತ್ತಿರುವುದು ವಿಷಾದಕರ.’ == ಧರ್ಮದ ಬಗೆಗೆ ಸುಭಾಷಿತ == ಸತ್ಯಂ ಬ್ರೂಯಾತ ಪ್ರಿಯಂ ಬ್ರೂಯಾತ್| ನಬ್ರೂಯಾತ್ ಸತ್ಯಮಪ್ರಿಯಂ|| ಪ್ರಿಯಂ ಚ ನಾSನೃತಂ ಬ್ರೂಯಾತ್| ಏಷ ಧರ್ಮಃ ಸನಾತನಃ || ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ಹೇಳಬೇಕು. ಅಪ್ರಿಯವಾದ, ಎಂದರೆ ಪರರ ಮನಸ್ಸಿಗೆ ಅಥವಾ ಪರರಿಗೆ ಕೆಡುಕಾಗಬಹುದಾದ ನೋವುಂಟು ಮಾಡುವ ಸತ್ಯವನ್ನು ಹೇಳಬೇಡ. ಬೇರೆಯವರಿಗೆ ಅಥವಾ ಇತರರಿಗೆ ಸಂತೋಷವಾಗುವುದೆಂದು ಅಥವಾ ಅನುಕೂಲವಾಗುವುದೆಂದು ಸುಳ್ಳನ್ನು ನುಡಿಯಬೇಡ. ಇದೇ ಸನಾತನವಾದ ಶಾಶ್ವತವಾದ ಬಹುಕಾಲದಿಂದ ಒಪ್ಪಿತವಾದ ಧರ್ಮ. == ವೇದವ್ಯಾಸರ ಧರ್ಮ ಸೂತ್ರ == 1) ಶ್ಲೋಕಾರ್ಧೇನ ಪ್ರವಕ್ಷಾಮಿ, ಯದುಕ್ತಂ ಗ್ರಂಥಕೋಟಿಭಿಃ | ಪರೋಪಕಾರಃ ಪುಣ್ಯಾಯ, ಪಾಪಾಯ ಪರಪೀಡನಂ || ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, 18 ಪುರಾಣಗಳನ್ನೂ, ಶ್ರುತಿ ಸ್ಮøತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ. ‘ಅರ್ಧ ಶ್ಲೋಕದಲ್ಲಿ ಕೋಟಿಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ; ಪರೋಪಕಾರವೇ ಪುಣ್ಯ, ಪರ ಪೀಡನೆಯೇ ಪಾಪ’. 2) ಶ್ರೂಯತಾಂ ಧರ್ಮ ಸರ್ವಸ್ವಂ, ಶ್ರುತ್ವಾಚ ಅವಧಾರ್ಯತಾಮ್ | ಆತ್ಮನಃ ಪ್ರತಿಕೂಲಾನಿ ನ ಪರೇಷಾಂ ಸಮಾಚರೇತ್ || ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, (ಕೇಳಿದ್ದರೂ, ಅದರಲ್ಲಿ ಏನೇ ಹೇಳಿದ್ದರೂ), ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು. ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ-ಪರರಿಗೂ ಪ್ರತಿಕೂಲವೆಂದು ಅರಿತು, ಮಾಡಬಾರದು == ವ್ಯಾಸಭಾರತದ ಪ್ರತಿಜ್ಞೆ == ಮಹಾಭಾರತದ ಆದಿಪರ್ವದ ಅಂಶಾವತರಣ ಪರ್ವವಾದ 62ನೆಯ ಅಧ್ಯಾಯದಲ್ಲಿ ಶ್ರೀ ಮಹಾಭಾರತದ ಪ್ರಶಂಸೆಂಯು ಬರುವುದು. ಆದರಲ್ಲಿ ವೈಶಂಪಾಯನ ಮುನಿಗಳು ಜನಮೇಜಯ ಮಹಾರಾಜನಿಗೆ ಮಹಾಭಾರತದ ಗುಣವರ್ಣನೆ ಮಾಡುತ್ತಾ, ಶ್ರೀ ಕೃಷ್ಣ ದ್ವೈಪಾಯನ ಮುನಿಯು ಅದ್ಭುತವಾದ ಈ ಮಹಾಭಾರತ ವ್ಯಾಖ್ಯಾನವನ್ನು ಮೂರವರ್ಷಗಳಲ್ಲಿ ರಚಿಸಿದನೆಂದು ಹೇಳಿದರು. ವೈಶಂಪಾಯನ ಮುನಿ ಮಾಡಿದ ಕೊನಯ ಪ್ರಶಂಸೆಯು ಈರೀತಿ ಇದೆ: ಧರ್ಮೇ-ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ | ಯಧಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್ ||64|| ಭರತಶ್ರೇಷ್ಠನೇ, ಧರ್ಮ, ಅರ್ಥ, ಕಾಮ ಮತು ಮೋಕ್ಷಗಳಿಗೆ ಸಂಬಂಧಿಸಿದ ಯಾವದೇ ವಿಷಯವು ಇದರಲ್ಲಿದ್ದರೆ ಮಾತ್ರ ಅದು ಬೇರೆ ಗ್ರಂಥಗಳಲ್ಲಿ ಸಿಗಬಹುದು. ಆದರೆ ಇದರಲ್ಲಿ ಯಾವುದು ಇಲ್ಲವೋ ಅದು ಬೇರೆಲ್ಲಿಯೂ ಸಿಗಲಾರದು. (ಮಹಾಭಾರತದ ಬಗ್ಗೆ ಈ ಶ್ಲೋಕವು ಬಹಳ ಪ್ರಸಿದ್ಧವಾಗಿದೆ) == ವಿದ್ಯೆಯಿಂದ ಸುಖ == ವಿದ್ಯಾ ದಧಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ| ಪಾತ್ರತ್ವಾ ಧನಮಾಪ್ನೋತಿ, ಧನದ್ಧರ್ಮಂ ತತಃ ಸುಖಂ|| ವಿದ್ಯೆಯಿಂದ ವಿನಯಗುಣವು ಬರುವುದು. ವಿನಯಗುಣದಿಂದ ಸಮಾಜದಲ್ಲಿ ಯೋಗ್ಯತೆ, ಗೌರವ ಸಿಗುವುದು. ಅದರಿಂದ ಸಂಪತ್ತು ಗಳಿಕೆಯಾಗುವುದು. ಸಂಪತ್ತಿನಿಂದ ಪ್ರಾಪಂಚಿಕ ಸುಖ ಸಿಗುವುದು. == ನೋಡಿ == ಗಾದೆಗಳು == ಉಲ್ಲೇಖ ==