ಸುಮಿತ್ರಾ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸುಮಿತ್ರಾ ಅಭಿನಯಿಸಿದ್ದಾರೆ. ೧೯೭೦ರ ದಶಕದ ಮಧ್ಯದಿಂದ ೧೯೮೦ರ ದಶಕದ ಮಧ್ಯದವರೆಗೆ ನಾಯಕಿಯಾಗಿ ಅಭಿನಯಿಸಿದ ಸುಮಿತ್ರಾ ನಂತರದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಸುಮಿತ್ರಾ ಅಭಿನಯದ ಗಮನಾರ್ಹ ಚಿತ್ರಗಳೆಂದರೆ ತಮಿಳಿನ ಅವಳುಂ ಪೆಣ್ ತಾನೆ(೧೯೭೪), ಅಣ್ಣನ್ ಒರು ಕೋಯಿಲ್(೧೯೭೭), ನಿಳಲ್ ನಿಜಮಾಗಿರದು(೧೯೭೮) ಮಲಯಾಳಂನ ನಿರ್ಮಾಲ್ಯಂ(೧೯೭೩), ಕನ್ನಡದ ಮುಗಿಯದ ಕಥೆ(೧೯೭೬), ಮಕ್ಕಳ ಸೈನ್ಯ(೧೯೮೦) ಮತ್ತು ರಾಮಾಚಾರಿ(೧೯೯೧). == ಆರಂಭಿಕ ಜೀವನ == ಕೇರಳದ ತ್ರಿಶೂರ್ನಲ್ಲಿ ರಾಘವನ್ ನಾಯರ್ ಮತ್ತು ಜಾನಕಿ ದಂಪತಿಯ ಮಗಳಾಗಿ ಜನಿಸಿದ ಸುಮಿತ್ರಾರಿಗೆ ಮೂವರು ಸಹೋದರರಿದ್ದಾರೆ. ಸುಮಿತ್ರಾರ ತಂದೆ ತೈಲ ಸಂಸ್ಕರಣಾ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಸುಮಿತ್ರಾ ತಮ್ಮ ಬಾಲ್ಯದಲ್ಲಿ ಮುರುಗಪ್ಪನ್ ಅವರಲ್ಲಿ ಶಾಸ್ತ್ರೀಯ ನೃತ್ಯವನ್ನು ಅಭ್ಯಸಿಸಿದ್ದರು. == ವೃತ್ತಿ ಜೀವನ == ೧೯೭೨ರಲ್ಲಿ ತೆರೆಗೆ ಬಂದ ಮಲಯಾಳಂ ಚಿತ್ರ ನಿರ್ತನಸಾಲದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಮಲಯಾಳಂನ ನಿರ್ಮಾಲ್ಯಂ(೧೯೭೩). ಪ್ರಖ್ಯಾತ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರು ತಮ್ಮ ಕಿರುಗಥೆಯನ್ನು ಆಧರಿಸಿ ನಿರ್ಮಿಸಿ ನಿರ್ದೇಶಿಸಿದ ಈ ಹೊಸ ಅಲೆಯ ಚಿತ್ರದಲ್ಲಿ ಸುಮಿತ್ರಾ ನೀಡಿದ ಉತ್ತಮ ನೈಜ ಅಭಿನಯ ಚಿತ್ರಪಂಡಿತರ ಗಮನ ಸೆಳೆಯಿತು. ಈ ಚಿತ್ರ ೧೯೭೩ನೇ ಸಾಲಿನ ಅತ್ತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿತ್ತು. ಸುಮಿತ್ರಾ ಅಭಿನಯದ ಮೊದಲ ತಮಿಳು ಚಿತ್ರ ಅವಳುಂ ಪೆಣ್ ದಾನೆ(೧೯೭೪). ಕೆಟ್ಟ ಸನ್ನಿವೇಶಕ್ಕೆ ಸಿಲುಕಿ ವೇಶ್ಯೆಯಾಗುವ ಯುವತಿಯೊಬ್ಬಳು ಸಹೃದಯಿ ನಾಯಕನನ್ನು ವಿವಾಹವಾಗಿ ಪ್ರಜ್ಞಾಪೂರ್ವಕ ಜೀವನ ನಡೆಸಿದರೂ ಸಮಾಜದಲ್ಲಿನ ಕುತ್ಸಿತ ಮನೋಭಾವ ಜನರ ಕುಹಕದ ಮಾತುಗಳಿಗೆ ಬೇಸತ್ತು ಬಲಿಯಾಗುವ ದುರಂತ ಕಥಾನಕವಿದ್ದ ಈ ಚಿತ್ರದಲ್ಲಿ ವೇಶ್ಯೆಯಾಗಿ ಅವಿಸ್ಮರಣೀಯ ಅಭಿನಯ ನೀಡಿದ ಸುಮಿತ್ರಾ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾದರು. ಶಿವಾಜಿ ಗಣೇಶನ್ ನಾಯಕರಾಗಿ ಅಭಿನಯಿಸಿದ ಅಣ್ಣನ್ ಒರು ಕೋಯಿಲ್(೧೯೭೭) ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾಗಿ ಆಘಾತದಿಂದ ತನ್ನ ಹಳೆಯ ನೆನಪುಗಳನ್ನು ಕಳೆದುಕೊಂಡ ಹುಡುಗಿಯಾಗಿ, ರಜನೀಕಾಂತ್ ಮತ್ತು ಶಿವಕುಮಾರ್ ಅವರೊಂದಿಗಿನ ಭುವನ ಒರು ಕೇಳ್ವಿಕುರಿ(೧೯೭೭) ಎಂಬ ಸಾಮಾಜಿಕ ಚಿತ್ರದಲ್ಲಿ ಲಂಪಟನೊಬ್ಬನಿಂದ ಅನ್ಯಾಯಕ್ಕೊಳಗಾದರೂ ಧೃತಿಗೆಡದೆ ನಾಯಕನ ನೆರವಿನಿಂದ ಹೊಸ ಜೀವನ ಕಂಡುಕೊಳ್ಳುವ ಹುಡುಗಿಯಾಗಿ ಸುಮಿತ್ರಾ ಅವರ ಅಭಿನಯ ಅಮೋಘ. ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದವು. ಆ ನಂತರದಲ್ಲಿ ಇವಳ್ ಒರು ಸೀತೈ(೧೯೭೮), ವಟತುಕ್ಕುಳ್ ಚದುರಂ(೧೯೭೮), ಮಚ್ಚಾನೈ ಪಾರ್ತೆಂಗಳ(೧೯೭೮) ಮುಂತಾದ ಚಿತ್ರಗಳಲ್ಲಿ ಪ್ರಭಾವಶಾಲಿ ಪಾತ್ರಗಳನ್ನು ಶಕ್ತವಾಗಿ ನಿರ್ವಹಿಸಿದ ಸುಮಿತ್ರಾ ಕೆ.ಬಾಲಚಂದರ್ ಅವರ ಕಮಲ್ ಹಾಸನ್ ನಾಯಕರಾಗಿ ಅಭಿನಯಿಸಿದ ನಿಳಲ್ ನಿಜಮಾಗಿರದು(೧೯೭೮) ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಶ್ಲಾಘನೀಯ ಅಭಿನಯ ನೀಡಿದ್ದಾರೆ. ಪ್ರತಿಭಾವಂತ ನಟ ಶಿವಕುಮಾರ್ ಅವರೊಂದಿಗೆ ಕಣ್ಣನ್ ಒರು ಕೈ ಕುಳಂದೈ(೧೯೭೮), ಚಿಟ್ಟುಕುರುವಿ(೧೯೭೮), ಕಡವುಳ್ ಅಮೈತ್ತ್ ಮೇಡೈ(೧೯೭೯), ಮುದಲ್ ಇರವು(೧೯೭೯) ಮತ್ತು ಮಂಜಳ್ ನಿಲಾ(೧೯೮೨) ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಪ್ರಬುದ್ಧ ಅಭಿನಯ ನೀಡಿದ ಸುಮಿತ್ರಾ ಮಲಯಾಳಂನ ಮೇರುನಟ ಪ್ರೇಮ್ ನಜೀರ್ ಅವರೊಂದಿಗೆ ದುರ್ಗಾ(೧೯೭೪), ನೀಲಪೊಣ್ಣ್ಮಾನ್(೧೯೭೫), ಕಡಮಟ್ಟತಾಚನ್(೧೯೮೪) ಮತ್ತು ಸನ್ನಾಹಂ(೧೯೮೫) ಮುಂತಾದ ಮಲಯಾಳಂ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡೀದ್ದಾರೆ. ಅವಳುಂ ಪೆಣ್ ದಾನೆ ಚಿತ್ರದ ಕನ್ನಡ ಅವತರಣಿಕೆಯಾದ ಮುಗಿಯದ ಕಥೆ(೧೯೭೬) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ ವಿಷ್ಣುವರ್ಧನ್ ಅವರೊಂದಿಗೆ ಮಕ್ಕಳ ಸೈನ್ಯ(೧೯೮೦) ಮತ್ತು ಸತ್ಯಂ ಶಿವಂ ಸುಂದರಂ(೧೯೮೮) ಚಿತ್ರದಲ್ಲಿ ಅಪೂರ್ವ ಅಭಿನಯ ನೀಡಿದ್ದಾರೆ. ೧೯೮೦ರ ದಶಕದ ಮಧ್ಯದಿಂದ ಪೋಷಕ ಪಾತ್ರಗಳಿಗೆ ಸೀಮಿತರಾದ ಸುಮಿತ್ರಾ ರಾಮಾಚಾರಿ(೧೯೯೧) ಚಿತ್ರದಲ್ಲಿ ನಾಯಕನ ತಾಯಿಯಾಗಿ ನೀಡಿದ ಹೃದಯಸ್ಪರ್ಶಿ ಅಭಿನಯ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿತ್ತು. ಕರ್ಣ(೧೯೮೬) ಮತ್ತು ಒಂದಾಗಿ ಬಾಳು(೧೯೮೯) ಚಿತ್ರದಲ್ಲಿ ನಾಯಕನ ವಾತ್ಸಲ್ಯಮಯಿ ಅತ್ತಿಗೆಯಾಗಿ ಪ್ರಶಂಸನೀಯ ಅಭಿನಯ ನೀಡಿದ ಸುಮಿತ್ರಾ ಗೋಪಿ ಕೃಷ್ಣ(೧೯೯೨) ಚಿತ್ರದಲ್ಲಿ ಮೋಹಕ ಅತ್ತೆಯಾಗಿ ಮಿಂಚಿದ್ದಾರೆ. ಶ್ರೀರಾಮಚಂದ್ರ(೧೯೯೨), ಕುರುಬನ ರಾಣಿ(೧೯೯೮), ಅಪ್ಪು(೨೦೦೦), ಅಭಿ(೨೦೦೩), ಮಿಲನ(೨೦೦೭), ಜಾಕಿ(೨೦೧೦), ಮೈನಾ(೨೦೧೩) ಸುಮಿತ್ರಾ ಪೋಷಕ ಪಾತ್ರದಲ್ಲಿ ನಟಿಸಿದ ಯಶಸ್ವಿ ಕನ್ನಡ ಚಿತ್ರಗಳು. ಅಗ್ನಿ ನಚತಿರಮ್(೧೯೮೮), ಚಿನ್ನ ತಂಬಿ(೧೯೯೧), ಸಿಂಗಾರವೇಲನ್(೧೯೯೨), ಸಿಂಗಂ(೨೦೧೦), ಸಿಂಗಂ ೨(೨೦೧೩) ಸುಮಿತ್ರಾ ಪೋಷಕ ನಟಿಯಾಗಿ ಅಭಿನಯಿಸಿದ ಪ್ರಮುಖ ತಮಿಳು ಚಿತ್ರಗಳಾಗಿವೆ. ತಮ್ಮ ಸಹಜ ಸೌಂದರ್ಯ, ನೈಜ ಭಾವಪೂರ್ಣ ಅಭಿನಯದಿಂದ ದಕ್ಷಿಣ ಭಾರತದ ಚಿತ್ರರಸಿಕರ ಮೆಚ್ಚುಗೆ ಗಳಿಸಿರುವ ಸುಮಿತ್ರಾ ವೃತ್ತಿ ಜೀವನದಲ್ಲಿ ಅನೇಕ ಪ್ರಭಾವಶಾಲಿ ಪಾತ್ರಗಳನ್ನು ನಿರಾಯಾಸವಾಗಿ ನಿಭಾಯಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟರಾದ ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಮಧು, ರಜನೀಕಾಂತ್, ಕಮಲ್ ಹಾಸನ್, ವಿಷ್ಣುವರ್ಧನ್, ರಾಜೇಶ್, ಶಿವಕುಮಾರ್, ವಿಜಯಕುಮಾರ್, ಸುಕುಮಾರನ್ ಮತ್ತು ಎಂ.ಜಿ.ಸೋಮನ್ ಮುಂತಾದವರೊಂದಿಗೆ ನಾಯಕಿಯಾಗಿ ಅಭಿನಯಿಸಿರುವ ಸುಮಿತ್ರಾ ರಜನೀಕಾಂತ್, ಕಮಲ್ ಹಾಸನ್ ಮತ್ತು ವಿಷ್ಣುವರ್ಧನ್ ಅವರಿಗೆ ತಾಯಿಯಾಗಿಯೂ ಅಭಿನಯಿಸಿದ ಹೆಗ್ಗಳಿಕೆಗೆ ಪಾತ್ರರು. ಎ.ಭೀಮ್ ಸಿಂಗ್, ಕೆ.ಬಾಲಚಂದರ್, ಎಸ್.ಪಿ.ಮುತ್ತುರಾಮನ್, ಭಾರ್ಗವ ಮತ್ತು ಡಿ.ರಾಜೇಂದ್ರ ಬಾಬು ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. == ವೈಯಕ್ತಿಕ ಜೀವನ == ಸುಮಿತ್ರಾ ಕನ್ನಡದ ಜನಪ್ರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಪತ್ನಿ. ಪುತ್ರಿಯರಾದ ಉಮಾಶಂಕರಿ ಮತ್ತು ನಕ್ಷತ್ರಾ ಕೂಡ ನಟಿಯರಾಗಿದ್ದಾರೆ. ಇವರ ಪತಿ ಡಿ.ರಾಜೇಂದ್ರ ಬಾಬು ಅವರು ನವೆಂಬರ್ ೩, ೨೦೧೩ರಂದು ನಿಧನರಾಗಿದ್ದಾರೆ. == ಪ್ರಶಸ್ತಿ/ಪುರಸ್ಕಾರ == ಕಲೈಮಾಮಣಿ - ತಮಿಳುನಾಡು ಸರ್ಕಾರ == ಸುಮಿತ್ರಾ ಅಭಿನಯದ ಚಿತ್ರಗಳು == ==== ಮಲಯಾಳಂ ==== ==== ತಮಿಳು ==== ==== ಕನ್ನಡ ==== == ಉಲ್ಲೇಖಗಳು ==