ಐತಿಹಾಸಿಕ ಪ್ರಸಿದ್ಧಿಯ ಈ ಊರನ್ನು ಪ್ರವೇಶಿಸುವಾಗ ದೂರದಿಂದಲೇ ಕಾಣುವ ಸುಂದರವಾದ ಪುರಾತನ ದೇವಾಲಯಗಳು ಮತ್ತು ಎತ್ತರವಾದ ಹುಡೆ ನಿಮ್ಮನ್ನು ಆಕರ್ಷಿಸುತ್ತವೆ. ಬನ್ನಿ, ನೋಡಿ ಸಂತೋಷಪಡಿ. ೧೧ನೇಯ ಶತಮಾನದಲ್ಲಿ ಗದಗ ಜಿಲ್ಹೆ ಸೂಡಿಯು ಕಲ್ಯಾಣ ಚಾಲುಕ್ಯ ಅರಸರ ಮಗಳಾದ ಅಪ್ರತಿಮ ಮಹಿಳೆ ಅಕ್ಕಾದೇವಿಯ ಆಡಳಿತ ಕಾಲದಲ್ಲಿ ಶಿಲ್ಪ ಕಲೆಯ ವೈಭವಕ್ಕೆ ಬಹಳ ಪ್ರಶಿದ್ಧಿ ಪಡೆದಿತ್ತೆಂದು ಮತ್ತು ಇಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಶಿಲ್ಪಕಲೆ,ಲಲಿತಕಲೆ, ಆಚಾರಸಂಹಿತೆ,ನಾಟ್ಯಶಾಸ್ತ್ರ, ಭಾಷಾ ಅಧ್ಯಯನ, ಕಲಿಸಲಾಗುತ್ತಿತ್ತೆಂದು ಪ್ರಾಚ್ಯ ವಸ್ತು ಇಲಾಖೆಯವರಿಂದ ೧೯೮೯ರಲ್ಲಿ ಇಲ್ಲಿಯ ಅನೇಕ ಶಿಲಾ ಲಿಪಿಗಳಿಂದ ಕಂಡುಬಂದಿದೆ. ಶ್ರೀ ಸತ್ಯನಾರಾಯಣರಾವ್ ಮತ್ತು ಶ್ರೀ ಎಸ್. ಕೆ. ವಾಸುದೇವರಾವ್ ಅವರ ಯೋಜನೆಯಂತೆ ಈ ಸ್ಮಾರಕಗಳ ಅಭಿವೃದ್ಧಿ ಕಾರ್ಯ ಯಶಸ್ವಿಯಾಗಿದೆ. ಇಲಾಖೆಯವರು ಬಹಳ ಸಿಥಿಲಗೊಂಡ ಆ ಪುರಾತನ ಕಟ್ಟಡಗಳ ಜೀರ್ಣೋದ್ಧಾರಕ್ಕೆ ೧೯೯೨ರಲ್ಲಿ ಐದಾರು ಲಕ್ಷ ರೂಪಾಯಿ ವ್ಯಯಿಸಿದ್ದರೂ ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ. ಈ ಹಂತದಲ್ಲಿ ನಾಗೇಶ್ವರ ದೇವಸ್ಥಾನ (ಜೋಡು ಕಳಸದ ಗುಡಿ), ಈಶ್ವರ, ನಂದಿಮಂಟಪ, ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿಯ ದೇವಾಲಯ ಮತ್ತು ಎಂಬತ್ತು ಅಡಿ ಸುತ್ತಳತೆಯ ಐವತ್ತು ಅಡಿ ಆಳದ ಬೃಹತ್ ನಾಗಕುoಡ ಭಾವಿ (ರಸ್ತ ಭಾವಿ) ಜೀರ್ಣೋದ್ಧಾರಗೊಂಡು ನೋಡುವಂತಾಗಿವೆ. ಜೋಡು ಕಳಸದ ದೇವಸ್ಥಾನವನ್ನು ಬಿಚ್ಚಿ ಪುನರ್ ಜೋಡಿಸಲಾಗಿದೆ. ಈ ಗುಡಿಯು ಮೊದಲು ಗಿಡಮರ, ಮುಳ್ಳುಕಂಟಿಗಳಲ್ಲಿ ಮುಚ್ಚಿ ಹೋಗಿತ್ತು. ಈಗ ಗುಡಿಯ ಹತ್ತಿರ ಶ್ರೀ ಗುರು ಮಹಾಂತೇಶ ಪ್ರೌಢಶಾಲೆಯ ಕ್ರೀಡಾಂಗಣ ಮತ್ತು ಕಟ್ಟಡಗಳ ವಿದ್ಯಾಕೇಂದ್ರವು ರಾಜ್ಯ ಹೆದ್ದಾರಿಯಲ್ಲಿಯೇ ಇರುವದರಿಂದ ಗುಡಿಯು ಕಾಣುವಂತಾಗಿದೆ. ಈ ದೇವಾಲಯವು ಎರಡು ಗೋಪುರಗಳನ್ನು ಹೊಂದಿದ್ದು ಅವು ಪೂರ್ವ ಮತ್ತು ಪಶ್ಚಿಮ ಮುಖವಾಗಿವೆ. ಗುಡಿಯು ಏಕ ನವರಂಗ, ಮುಖ ಮಂಟಪ, ಎರಡು ಗರ್ಭಗೃಹ ಒಳಗೊಂಡು ದ್ವಿಕೂಟಾಚಲ ಮಾದರಿಯಲ್ಲಿದೆ. ಪೂರ್ವಾಭಿಮುಖಿ ಗರ್ಭಗುಡಿಯಲ್ಲಿ ಅಪೂರ್ವ ಕೆತ್ತನೆಯ ಈಶ್ವರನ ಉಬ್ಬು ಶಿಲ್ಪವಿದೆ. ಸೂರ್ಯನ ಉಬ್ಬು ವಿಗ್ರಹ ಲಲಾಟಬಿಂದುವಿನಲ್ಲಿ ಇದ್ದು ಇದು ಇಲ್ಲಿಯ ಇನ್ನೊಂದು ವೈಶಿಷ್ಟ್ಯವಾಗಿದೆ. ಹನ್ನೆರಡು ಕಂಬಗಳನ್ನು ಹೊಂದಿ ವೃತ್ತಾಕಾರವಾಗಿರುವ ನವರಂಗದಲ್ಲಿ ಸುಂದರ ನಂದಿಯ ವಿಗ್ರಹವಿದೆ. ಇಡೀ ದೇವಾಲಯದ ಒಳಗೆ ಮತ್ತು ಹೊರಗೆ ಮತ್ತು ನಾಗಕುಂಡ ಭಾವಿಯ ಒಳಗೋಡೆಯಲ್ಲಿ ಉಬ್ಬುಕಂಬದ ಗೋಪುರ ಮಾದರಿಯ ಕೆತ್ತನೆ ಸಹ ಬೆರಗುಗೊಳಿಸುವಂತೆ ಇದೆ. ಭಾವಿಯ ತಳಭಾಗದಲ್ಲಿ ಸುತ್ತಲೂ ಮೆಟ್ಟಲುಗಳಿದ್ದು ನಡುವೆ ದ್ವಾರಮಂಟಪವಿದೆ. ಈ ಎಲ್ಲ ಶಿಲ್ಪ ಕಲಾವೈಭವ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇವೆ. ಈ ಪುಷ್ಕರಣಿ ಕಲ್ಯಾಣ ಚಾಲುಕ್ಯರ ಅತಿ ವೈಭವದ ಕೊಳ ಎಂಬುದಕ್ಕೆ ಐತಿಹಾಸಿಕ ದಾಖಲೆ ಇದೆ. ಶಿಲಾಮಂಟಪದಲ್ಲಿ ಇರುವ, ಸೂಕ್ಷ್ಮ ಕೆತ್ತನೆಯ ಗೆಜ್ಜೆ ಸರಗಳಿಂದ ಅಲಂಕರಿಸಿದ ಬೃಹದಾಕಾರದ ನಂದಿಯ ವಿಗ್ರಹ ಮತ್ತು ವೇದಿಕೆ, ಗುಡಿಯಲ್ಲಿರುವ ನಂದಿ ವಿಗ್ರಹಗಳನ್ನು ನುಣುಪಾದ ಕಪ್ಪು ಏಕಶಿಲಾ ಬಂಡೆಗಳಲ್ಲಿಯೇ ನಿರ್ಮಿಸಲಾಗಿದೆ. ಎಲ್ಲ ಕಡೆಗೂ ಸೂಕ್ಷ್ಮ ಕುಸುರಿ ಕೆಲಸವನ್ನು ಕಾಣಬಹುದು. ಮಹಾಸಾಮಂತಾಧಿಪತಿ ನಾಗದೇವನು ಹನ್ನೊಂದನೆ ಶತಮಾನದಲ್ಲಿ ಕಟ್ಟಿಸಿದನು. ಊರೊಳಗಿರುವ ಮಲ್ಲಿಕಾರ್ಜುನ (ಶಾಸನಗಳಲ್ಲಿ ಅಚಲೇಶ್ವರ ಗುಡಿ) ದೇವಾಲಯ ಜೀರ್ಣೋದ್ಧಾರ ಆಗಬೇಕಾಗಿದೆ. ಈ ಗುಡಿಯಲ್ಲಿ ಗರ್ಭಗುಡಿಯ ಎಡ ಬಲಗಳಲ್ಲಿ ಸುಂದರ ಶಿಲ್ಪಕಲೆಯ ಶಿವ ಪಾರ್ವತಿ ವಿಗ್ರಹ ಮತ್ತು ಅನಂತಶಯನ ವಿಗ್ರಹಗಳು ಏಕಶಿಲೆಯಲ್ಲಿವೆ. ಈ ಶಿಲ್ಪಕಲೆಗಳು ದ್ವಿಕೂಟಾಚಲ ಮಾದರಿಯಲ್ಲಿವೆ. ಈ ದೇವಸ್ಥಾನದ ಹತ್ತಿರ ಶ್ರೀ ಮೈಸೂರು ಮಠದ ಪುರಾತನ ಕಟ್ಟಡ ಮತ್ತು ಶಿಕ್ಷಣ ಸಂಸ್ಥೆಯ ಹೊಸ ಕಟ್ಟಡಗಳಿದ್ದು ಐವತ್ತು ವರ್ಷಗಳ ಹಿಂದೆ ಈ ಗ್ರಾಮೀಣ ಭಾಗದ ಶಿಕ್ಷಣ ಕ್ರಾಂತಿಗಾಗಿ ಬಡಮಕ್ಕಳಿಗಾಗಿ ಪ್ರಸಾದ ನಿಲಯವನ್ನೂ, ಶಿಕ್ಷಣ ಸಂಸ್ಥೆಗಳನ್ನೂ ಪ್ರಾರಂಭಿಸಿದ ಪೂಜ್ಯ ಜಗದ್ಗುರು ಗುರುಮಹಾಂತೇಶ್ವರ ಸ್ವಾಮಿಗಳ ಗದ್ದಿಗೆಯ ಮಂದಿರವು ನಿರ್ಮಾಣಗೂ೦ಡಿದೆ. ಈ ಸಂಸ್ಥೆಯ ಇಂದಿನ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ವಿಜಯ ಮಹಾಂತ ಶಿವಯೋಗಿಗಳು ಹೊಸ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿರುವರು. ಈ ಎಲ್ಲ ದೇವಸ್ಥಾನಗಳ ಹತ್ತಿರವೇ ಹೊಸ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡಗಳು, ಶ್ರೀ ಅನ್ನದಾನೇಶ್ವರ ಕಲ್ಯಾಣಮಂಟಪ (ಸಮುದಾಯ ಭವನ)ಮತ್ತು ಚಿದಂಬರೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ಈಗ ಈ ಪುರಾತನ ಮಂದಿರಗಳ ಸುತ್ತಲೂ ಸುಂದರ ಪರಿಸರವಿದ್ದು ಪ್ರವಾಸಿಗರನ್ನು ಆಕರ್ಷಿಸುವಂತಾಗಿದೆ. == ಇವನ್ನೂ ನೋಡಿ == == ಬಾಹ್ಯ ಸಂಪರ್ಕಗಳು ==