ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್: España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ. ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್‌ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್. ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್‌ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ. 1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ. ಕ್ಯಾಟಲೋನಿಯಾ ೨೦೧೭ರ ಅಕ್ಟೋಬರ್ ನಲ್ಲಿ ಸ್ವಾತಂತ್ರ್ಯ ಹೊಂದುವ ಕುರಿತು ಒಂದು ಜನಮತ ಸಂಗ್ರಹ ನಡೆಸಿದೆ. == ಪ್ರಮುಖ ನಗರಗಳು == ಬಾರ್ಸಿಲೋನಾ ಮ್ಯಾಡ್ರಿಡ್ ವೆಲೆಂಸಿಯ == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಪ್ರವಾಸೋದ್ಯಮ ಪೋರ್ಟಲ್ ಹವಾಮಾನ ಮುನ್ಸೂಚನೆ