ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು. == ಜೀವನ == ದೇವೇಗೌಡರು ಮೇ ೧೮, ೧೯೩೩ ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ . ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಯವರನ್ನು ಮಿತ್ರರನ್ನಾಗಿಸಿ ಕೊಂಡರು. == ಸಾರ್ವಜನಿಕ ಜೀವನ == ೧೯೫೩ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೨ ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು. ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ೧೯೭೨ ರಿಂದ ೧೯೭೬ ರವರೆಗೆ ಮತ್ತು ನವೆಂಬರ್ ೧೯೭೬ ರಿಂದ ೧೯೭೭ ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ೧೯೭೫-೭೬ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. ೧೯೮೭ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ೧೯೯೧ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. == ಮುಖ್ಯಮಂತ್ರಿ == ಇದರ ನಂತರ ಜನತಾ ದಳಕ್ಕೆ ರಾಜ್ಯಾಧ್ಯಕ್ಷರಾದ ದೇವೇಗೌಡರು ೧೯೯೪ ರಲ್ಲಿ ಕರ್ನಾಟಕ ರಾಜ್ಯದ ೧೪ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. == ಪ್ರಧಾನಮಂತ್ರಿ == ೧೯೯೬ ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಸಂಘ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ, ದೇವೇಗೌಡರು ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಭಾರತದ 11 ನೇ ಪ್ರಧಾನಿಯಾದರು. ಅವರು 1 ಜೂನ್ 1996 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 1997 ರ ಏಪ್ರಿಲ್ 21 ರವರೆಗೆ ಅಧಿಕಾರದಲ್ಲಿ ಮುಂದುವರೆದರು. ಅಲ್ಲದೆ, ಅವರು ಯುನೈಟೆಡ್ ಫ್ರಂಟ್‌ನ ಸ್ಟೀರಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು. ದೆಹಲಿ ಮೆಟ್ರೋ ಯೋಜನೆಯ ಕೀರ್ತಿ ಅವರು ಸಲ್ಲುತ್ತದೆ. ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ರಾಷ್ಟ್ರಾಧ್ಯಕ್ಷರಾಗಿದ್ದಾರೆ. == ಉಲ್ಲೇಖಗಳು ==