ಸಾಂದರ್ಭಿಕ ಚಿತ್ರ (Credit: Meta AI)ಬೆಂಗಳೂರು: ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರಗಳಲ್ಲಿ ದುಡಿಯುವ ಉದ್ಯೋಗಿಗಳ ಕೆಲಸದ ಅವಧಿಯನ್ನು ವಿಸ್ತರಿಸಲು ತಿದ್ದುಪಡಿ ಕಾಯ್ದೆ ತರಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿವೆ.ಕರ್ನಾಟಕ ರಾಜ್ಯ ಐಟಿ ನೌಕರರ ಒಕ್ಕೂಟ (ಕೆಐಟಿಯು) ಹಾಗೂ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ತಿದ್ದುಪಡಿಯು ಪ್ರಸ್ತುತ ಮೂರು ಪಾಳಿಗಳಲ್ಲಿರುವ ಪದ್ಧತಿಯ ಬದಲಿಗೆ ಎರಡು ಪದ್ಧತಿಯನ್ನು ಅನುಮತಿಸುವುದಾಗಿದೆ. ಇದರಿಂದ ಮೂರನೇ ಒಂದು ಭಾಗದಷ್ಟು ಕಾರ್ಮಿಕರನ್ನು ವಜಾಗೊಳಿಸುವ ಹುನ್ನಾರವಾಗಿದೆ ಎಂದು ತಿಳಿಸಿದೆ.  ಐಟಿ ವಲಯದ ಶೇ.45 ರಷ್ಟು ಉದ್ಯೋಗಿಗಳು ಒತ್ತಡದಂತ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಶೇ.55 ರಷ್ಟು ಮಂದಿ ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈಗ ಜಾರಿಗೆ ತರಲು ಹೊರಟಿರುವ ತಿದ್ದುಪಡಿ ಉದ್ಯೋಗಿಗಳನ್ನು ಮತ್ತಷ್ಟು ಆಘಾತಕ್ಕೆ ದೂಡುತ್ತದೆ ಎಂದೂ ಆತಂಕ ವ್ಯಕ್ತಪಡಿಸಿವೆ.  ಏನಿದು ಕಾಯ್ದೆ?: ರಾಜ್ಯ ಸರಕಾರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಆ ಮೂಲಕ ಐಟಿ ಕ್ಷೇತ್ರದ ಉದ್ಯೋಗಿಗಳ ಕೆಲಸದ ಅವಧಿ ದಿನಕ್ಕೆ 12 ತಾಸಿಗೂ ಹೆಚ್ಚಿಗೆ ವಿಸ್ತರಣೆಯಾಗಲಿದೆ.  ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಳೆದ ಶುಕ್ರವಾರ ಈ ಸಂಬಂಧ ವಿಕಾಸಸೌಧದಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಐಟಿ ಬಿಟಿ ಕ್ಷೇತ್ರದಲ್ಲಿ ದುಡಿಯುವ ನೌಕರರ ಕೆಲಸದ ಅವಧಿ ವಿಸ್ತರಣೆ ಬಗ್ಗೆ ಸಭೆ ಚರ್ಚಿಸಿದ್ದಾರೆ. ಈ ಪ್ರಸ್ತಾಪಿತ ತಿದ್ದುಪಡಿಯಂತೆ ಐಟಿ, ಬಿಪಿಒ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ದಿನಕ್ಕೆ 12 ತಾಸಿಗೂ ಹೆಚ್ಚು ಅವಧಿ ಕೆಲಸ ಮಾಡಬೇಕಾಗುತ್ತದೆ. ಸತತ ಮೂರು ತಿಂಗಳಲ್ಲಿ 125 ತಾಸು ಮೀರದಂತೆ ಕೆಲಸ ಮಾಡುವ ತಿದ್ದುಪಡಿ ಇದಾಗಿದೆ. ಪ್ರಸಕ್ತ ಕಾಯ್ದೆಯಂತೆ ದಿನಕ್ಕೆ ಗರಿಷ್ಠ 10 ತಾಸು ಕೆಲಸ ಮಾಡಬಹುದಾಗಿದೆ. ಇದರಲ್ಲಿ ಒಟಿಯೂ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.  