ಬೆಂಗಳೂರು: ಕರ್ನಾಟಕದಿಂದ ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವ ಅನೇಕ ಜನರು ವಿದೇಶಗಳಲ್ಲಿ ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಆದುದರಿಂದ, ವಿದೇಶಕ್ಕೆ ತೆರಳುವ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಸಮಿತಿಗೆ ಮಾಹಿತಿ ನೀಡಬೇಕು ಎಂದು ರಾಜ್ಯದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.ಮಂಗಳವಾರ ನಗರದ ವಿಧನಸೌಧದ ಬಳಿಯ ಬಹುಮಹಡಿ ಕಟ್ಟಡದಲ್ಲಿನ ಅನಿವಾಸಿ ಭಾರತೀಯ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದೇಶಕ್ಕೆ ಯಾರು ಹೋದರೂ ನಮಗೆ ಮಾಹಿತಿ ಸಿಗುತ್ತಿಲ್ಲ. ಅಲ್ಲಿ ಹೋಗಿ ಸಮಸ್ಯೆಗೆ ಸಿಲುಕಿದಾಗ ಮಾತ್ರ ನಮಗೆ ತಿಳಿಯುತ್ತದೆ. ರಾಮನಗರದ ನಿವಾಸಿ ‘ಮುಹಮ್ಮದ್ ಅಶ್ವಾಕ್’ ಎಂಬವರು ಅನಧಿಕೃತ ಏಜೆನ್ಸಿ ಮೂಲಕ ಸೌದಿ ಅರೇಬಿಯಾಕ್ಕೆ ಹೋಗಿ ವಂಚನೆಗೆ ಒಳಗಾಗಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.   ಎರಡು ವಾರದ ಹಿಂದೆ ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಕರ್ನಾಟಕ ಅನಿವಾಸಿ ಭಾರತೀಯ ಫೋರಂ(ಕೆಎನ್‍ಆರ್‍ಐ)ನ ಕನ್ನಡ ಸಂಘದ ಆರೀಫಾ ಎಂಬವರು ನಮ್ಮನ್ನು ಸಂಪರ್ಕಿಸಿ ಮುಹಮ್ಮದ್ ಅಶ್ವಾಕ್ ಅಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ನೀಡಿದರು. ಮುಹಮ್ಮದ್ ಅಶ್ವಾಕ್‍ಗೆ ಬೆಂಗಳೂರಿನ ಶಿವಾಜಿನಗರದ ಏಜೆಂಟ್ ಮುಹಮ್ಮದ್ ಪೀರ್ ಎಂಬವರು ಸೌದಿ ಅರೇಬಿಯಾದಲ್ಲಿ ಕೆಲಸ ಕೊಡಿಸುವುದಾಗಿ 1 ಲಕ್ಷ ರೂ.ಹಣ ಪಡೆದುಕೊಂಡು ಕಳುಹಿಸಿದರು ಎಂದು ಆರತಿ ಕೃಷ್ಣ ಹೇಳಿದರು.  ಸೌದಿ ಅರೇಬಿಯಾದಲ್ಲಿ ಮುಹಮ್ಮದ್ ಅಶ್ವಾಕ್ ಅವರಿಗೆ ಪ್ರಾರಂಭದ 2 ತಿಂಗಳು ಕೆಲಸ ಮತ್ತು ಸಂಬಳ ನೀಡಿಲ್ಲ. ನಂತರ ಸುಮಾರು 7 ತಿಂಗಳು ಅವರು ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಮುಹಮ್ಮದ್ ಅಶ್ವಾಕ್ ಗೃಹ ಬಂಧನದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅದನ್ನು ಸಹಿಸದೇ ಅಲ್ಲಿಂದ ಬಲವಂತವಾಗಿ ಹೊರಬಂದು ಸುಮಾರು 3 ತಿಂಗಳು ಕೆಲಸವಿಲ್ಲದೆ ಪರದಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.  ಈ ಸಂದರ್ಭದಲ್ಲಿ ಒಪ್ಪಂದದಂತೆ ಅವರಿಗೆ ಸಂಬಳ ಹಾಗೂ ಆಹಾರವನ್ನು ನೀಡದೆ ಸತಾಯಿಸಿದ್ದಾರೆ. ಅಶ್ವಾಕ್ ಬಳಿ ಸಂಬಳವೂ ಇಲ್ಲದೆ, ಭಾರತಕ್ಕೆ ಬರಲು ಹಣವೂ ಇಲ್ಲದೆ, ಹತ್ತಿರದ ಮಸೀದಿಯಲ್ಲಿ ಸುಮಾರು ಎರಡು ತಿಂಗಳು ಕಾಲ ಕಳೆದಿದ್ದಾರೆ. ಈ ವೇಳೆ  ಕೆಎನ್‍ಆರ್‍ಐ ಜಿದ್ದಾ ಕನ್ನಡ ಸಂಘದ ಸದಸ್ಯರು ಇವರನ್ನು ಭೇಟಿ ಮಾಡಿ ಮೋಸ ಹೋಗಿರುವ ವಿಷಯ ತಿಳಿದುಕೊಂಡಿದ್ದಾರೆ ಎಂದು ಆರತಿ ಕೃಷ್ಣ ಹೇಳಿದರು.  ಆನಂತರ, ಅಶ್ವಾಕ್ ಅವರ ಕುಟುಂಬದವರು ನಮ್ಮ ಸಮಿತಿ ಕಚೇರಿಗೆ ಭೇಟಿ ನೀಡಿ ತಮ್ಮ ಮಗನನ್ನು ಭಾರತಕ್ಕೆ ಕರೆಸುವಂತೆ ಕೋರಿಕೊಂಡರು. ಅವರ ಮನವಿ ಮೇರೆಗೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ದೂರವಾಣಿ ಮುಖಾಂತರ ತಿಳಿಸಿದ ತಕ್ಷಣ, ಜಿದ್ದಾ ಕೌನ್ಸುಲ್ ಜನರಲ್ ಅನ್ನು ಸಂಪರ್ಕಿಸಿ ತ್ವರಿತವಾಗಿ ‘ಎಕ್ಸಿಟ್ ಪಾಸ್’ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.  ಕೆ.ಎನ್.ಆರ್.ಐ ಜಿದ್ದಾ ಕನ್ನಡ ಸಂಘವು ಮುಹಮ್ಮದ್ ಅಶ್ವಾಕ್ ವಿಮಾನ ಟಿಕೆಟ್ ಮತ್ತು ಭಾರತಕ್ಕೆ ವಾಪಸ್ಸಾಗುವವರೆಗೂ ಆಗುವವರೆಗಿನ ವೆಚ್ಚಗಳನ್ನು ಭರಿಸಿ ನೆರವಾಗಿದ್ದಾರೆ ಎಂದು ಆರತಿ ಕೃಷ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಎನ್‍ಆರ್‍ಐ ಜಿದ್ದಾ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮುಹಮ್ಮದ್ ಸೈಫುದ್ದೀನ್, ಕೆಎನ್‍ಆರ್‍ಐ ಕಾರ್ಯದರ್ಶಿ ಸೈಯದ್ ಶಕೀಲ್ ಅಹ್ಮದ್, ವಂಚನೆಗೊಳಗಾದ ಮುಹಮ್ಮದ್ ಅಶ್ವಾಕ್ ಹಾಗೂ ಅವರ ತಾಯಿ ನೂರ್‍ಬಾನು ಮತ್ತಿತರರು ಹಾಜರಿದ್ದರು.‘ಸುಮಾರು ಐದು ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಯಾರೂ ಉಪಾಧ್ಯಕ್ಷರು ಇರಲಿಲ್ಲ. ನಾನು ಉಪಾಧ್ಯಕ್ಷೆಯಾದ ನಂತರ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇನೆ. ವಿದೇಶಕ್ಕೆ ಹೋಗುವವರು ಸಮಿತಿಯಲ್ಲಿ ಹೆಸರು ನೋಂದಾಯಿಸಿ ಹೋಗಬೇಕು. ರಾಜ್ಯದಲ್ಲಿ ಸುಮಾರು 15ಕ್ಕೂ ಹೆಚ್ಚು ಅನಧಿಕೃತ ಏಜೆನ್ಸಿಗಳಿವೆ. ಅಕ್ಟೋಬರ್‍ನಿಂದ ಇದುವರೆಗೂ ವಿದೇಶಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿರುವ 16 ಪ್ರಕರಣಗಳು ಬಂದಿವೆ. ‘ಮುಹಮ್ಮದ್ ಅಶ್ವಾಕ್’ ವಿದೇಶಕ್ಕೆ ಕಳುಹಿಸಿರುವ ಏಜೆಂಟ್ ವಿರುದ್ಧ ಈಗಾಗಲೇ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’  -ಡಾ.ಆರತಿ ಕೃಷ್ಣ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ‘ಸೌದಿ ಅರೇಬಿಯಾದಲ್ಲಿ ಸುಮಾರು 8-9 ತಿಂಗಳು ವಿವಿದಡೆ ಕೆಲಸ ಮಾಡಿದರೂ ಸಂಬಳ ನೀಡಿಲ್ಲ. ಅಲ್ಲಿ ಸರಿಯಾಗಿ ಆಹಾರವೂ ಸಿಗುತ್ತಿರಲಿಲ್ಲ. ಸಂಬಳ ಕೇಳಿದರೆ ನನ್ನನ್ನು ಬೇರೆ ಕಡೆ ವರ್ಗಾಯಿಸುತ್ತಿದ್ದರು. ಕುಟುಂಬದವರನ್ನು ಸಂಪರ್ಕಿಸಲೂ ಆಗುತ್ತಿರಲಿಲ್ಲ. ಸೌದಿ ಅರೇಬಿಯಾದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ. ಅಲ್ಲಿದ್ದ ಕರ್ನಾಟಕದವರೊಬ್ಬರು ನನಗೆ ಸಹಾಯ ಮಾಡಿದರು’   -ಮುಹಮ್ಮದ್ ಅಶ್ವಾಕ್, ವಂಚನೆಗೊಳಗಾದವರು  