ಸಾಂದರ್ಭಿಕ ಚಿತ್ರಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟಗೊಂಡಿದ್ದು, ಶೇ.23.73ರಷ್ಟು ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ 76,005 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 75,466 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17,911 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಜೂ.24ರಿಂದ ಜು.5ರವರೆಗೂ ರಾಜ್ಯದಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಕಟಿಸಿದ್ದು, ವೆಬ್‍ಸೈಟ್ https://karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.ರಾಜ್ಯಾದ್ಯಂತ ಜು.9 ರಿಂದ ಜು.14ರ ವರೆಗೆ 2,293 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊದಲ, ಎರಡನೇ ಮತ್ತು ಮೂರನೇ ಪರೀಕ್ಷೆಯ ವಿಷಯವಾರು ಗರಿಷ್ಠ ಅಂಕ ಪರಿಗಣಿಸಿ, ಒಟ್ಟಾರೆಯಾಗಿ 2023-24ನೆ ಸಾಲಿನ ಪಿಯುಸಿ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸುವುದಾಗಿ ಮಂಡಲಿ ತಿಳಿಸಿದೆ.  ಬಾಲಕಿಯರೇ ಮೇಲುಗೈ: ಪರೀಕ್ಷೆ ಬರೆದ 44,027 ಬಾಲಕರ ಪೈಕಿ 9,531 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.21.65ರಷ್ಟು ಫಲಿತಾಂಶ ಪಡೆದಿದ್ದಾರೆ. 31,439 ಬಾಲಕಿಯರ ಪೈಕಿ 8,380 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ.26.65ರಷ್ಟು ಫಲಿತಾಂಶ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಶೇ.21.71, ವಾಣಿಜ್ಯ ವಿಭಾಗದಲ್ಲಿ ಶೇ.23.58, ವಿಜ್ಞಾನ ವಿಭಾಗದಲ್ಲಿ ಶೇ.27.06ರಷ್ಟು ಫಲಿತಾಂಶ ಬಂದಿದೆ.  ಮರುಮೌಲ್ಯಮಾಪನ: ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಜು.17 ರಿಂದ ಜು.21ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದ್ದು, ಸ್ಕ್ಯಾನಿಂಗ್ ಪ್ರತಿ ಡೌನ್ ಲೋಡ್ ಮಾಡಲು ಜು.18 ರಿಂದ ಜು.22ರವರೆಗೆ ಅವಕಾಶ ನೀಡಲಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆದವರು ಮಾತ್ರ ಮರು ಎಣಿಕೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜು.18 ರಿಂದ 24ರ ಒಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.  ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 500 ರೂ. ಮರುಮೌಲ್ಯಮಾಪನ ಪ್ರತಿ ವಿಷಯಕ್ಕೆ 1,670 ರೂ. ನಿಗದಿಪಡಿಸಲಾಗಿದೆ. ಮರು ಎಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಯಾವುದೇ ಸಂದರ್ಭದಲ್ಲಿ, “ಕರ್ನಾಟಕ ಪ್ರೀ-ಯೂನಿವರ್ಸಿಟಿ ಕೋರ್ಸ್ ಎಸ್‍ಎಲ್‍ಪಿಇ-1997, 29(ಎ)” ಪ್ರಕಾರ ಈ ಹಿಂದೆ ಗಳಿಸಿದ ಅಂಕಗಳೇ ಪರೀಕ್ಷೆ-3ರ ಅಂಕಗಳೆಂದು ಪರಿಗಣಿಸಲಾಗುವುದು. ಮರುಮೌಲ್ಯಮಾಪಕ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮಂಡಲಿ ಮಾಹಿತಿ ನೀಡಿದೆ.  ಮೊದಲ ಎರಡು ಪರೀಕ್ಷೆಯಲ್ಲಿ ಪಾಸಾಗದೇ ಇದ್ದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಘೋಷಿಸದೇ ಇನ್‍ಕಂಪ್ಲೀಟ್ ಎಂದು ಕರೆಯಲಾಗಿತ್ತು. ಈಗ ಮೂರನೇ ಪರಿಕ್ಷೆಯಲ್ಲಿಯೂ ಯಾರು ಎಲ್ಲ ವಿಷಯ ಪಾಸ್ ಮಾಡಿಕೊಳ್ಳಲು ಆಗಿಲ್ಲವೋ ಅವರನ್ನು ಅನುತ್ತೀರ್ಣ ಎಂದು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದು, ಮುಂದಿನ ವರ್ಷ ಪರೀಕ್ಷೆ ಬರೆಯಬಹುದಾಗಿದೆ.   