ಡಾ.ಶ್ರೀನಿವಾಸ್.ಎಸ್ಬೆಂಗಳೂರು : ಉಡುಪಿಯ ವೈದ್ಯ ಡಾ.ಕೀರ್ತನ್ ಉಪಾಧ್ಯ ಅವರ ನಡೆ ಒಪ್ಪಿಕೊಳ್ಳುವಂಥದ್ದಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿದ್ದಾರೆ ಎನ್ನಲಾದ ಪೋಸ್ಟನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಐಎಂಎ ರಾಜ್ಯ ಘಟಕದ ಅಧ್ಯಕ್ಷನಾಗಿ, ವೈದ್ಯರ ಪ್ರತಿನಿಧಿಯಾಗಿ ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಈ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಐಎಂಎ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಶ್ರೀನಿವಾಸ್.ಎಸ್ ಹೇಳಿದ್ದಾರೆ.ಉಡುಪಿಯ ಬ್ರಹ್ಮಾವರದಲ್ಲಿರುವ ಆಸ್ಪತ್ರೆಯೊಂದರ ವೈದ್ಯ ಡಾ.ಕೀರ್ತನ್ ಉಪಾಧ್ಯ ಅವರ ಎಕ್ಸ್ ಖಾತೆಯಿಂದ ಮಾಡಲಾಗಿದೆ ಎನ್ನಲಾದ ವಿವಾದಿತ ಟ್ವೀಟ್ ಬಗ್ಗೆ ʼವಾರ್ತಾಭಾರತಿʼ ಜೊತೆ ಮಾತನಾಡಿದ ಡಾ.ಶ್ರೀನಿವಾಸ್ ಅವರು, "ಎಂಬಿಬಿಎಸ್ ಮಾಡಿ ವೈದ್ಯರಾಗಿ ಸೇವೆಗೆ ಬರುವ ಮುನ್ನ, ನಾವು ವೈದ್ಯರಾದ ಮೇಲೆ ಯಾವುದೇ ಜಾತಿ ಧರ್ಮದ ರೋಗಿಗಳು ಬಂದರೂ ಜಾತ್ಯತೀತವಾಗಿ ಅವರಿಗೆ ಚಿಕಿತ್ಸೆ ನೀಡುತ್ತೇವೆ ಎಂದು ಪ್ರಮಾಣ ಮಾಡಿರುತ್ತೇವೆ. ಜಾತಿ ಧರ್ಮಗಳ ತಾರತಮ್ಯವನ್ನು ವೈದ್ಯರು ಯಾವತ್ತೂ ಇಟ್ಟುಕೊಳ್ಳಬಾರದು. ಲಿಂಗಬೇಧದ ಚೌಕಟ್ಟನ್ನೂ ಮೀರಿ ಚಿಕಿತ್ಸೆ ನೀಡಬೇಕು. ನಾವು ಪ್ರಮಾಣ ಮಾಡಿದಂತೆಯೇ ವೃತಿಯಲ್ಲೂ ನಡೆದುಕೊಳ್ಳಬೇಕು. ಅದನ್ನು ನಾವು ಪಾಲಿಸಬೇಕು. ಇದನ್ನು ಮೀರಿ ಯಾವತ್ತೂ ನಡೆಯಬಾರದು" ಎಂದು ಹೇಳಿದ್ದಾರೆ.ಡಾ. ಕೀರ್ತನ್‌ ಉಪಾಧ್ಯ ಮತ್ತು ಅವರ ಪೋಸ್ಟ್‌ ನ ಸ್ಕ್ರೀನ್‌ ಶಾಟ್‌ ಡಾ.ಕೀರ್ತನ್ ಉಪಾಧ್ಯ ಅವರ ಮೇಲೆ ಐಎಂಎ ಸ್ಥಳೀಯ ಘಟಕದಿಂದ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ವೈದ್ಯರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಬೇಡಿ ಎಂದು ಈಗಾಗಲೇ ಹೇಳಿದ್ದೇವೆ. ಒಬ್ಬ ವೈದ್ಯರ ಬಳಿಗೆ ಎಲ್ಲಾ ಧರ್ಮದ ಜನರೂ ಬರುತ್ತಾರೆ. ವೈದ್ಯರು ಹೀಗೆ ಮಾಡುತ್ತಾರೆ ಎಂದಾಗ ರೋಗಿಗಳಿಗೆ ವೈದ್ಯರ ಮೇಲಿರುವ ನಂಬಿಕೆಯೇ ಹೊರಟು ಹೋಗುತ್ತದೆ. ಅಭದ್ರತೆ ಕಾಡುತ್ತದೆ. ಇದನ್ನು ಹೋಗಲಾಡಿಸುವ ಕೆಲಸ ಮಾಡಬೇಕು. ವೈದ್ಯರು ಇಂತಹ ಘಟನೆಗಳಲ್ಲಿ ಭಾಗಿಯಾಗಬಾರದು ಎಂದು ಡಾ.ಶ್ರೀನಿವಾಸ್ ಅವರು ಕಿವಿಮಾತು ಹೇಳಿದ್ದಾರೆ.ಜುಲೈ 13 ರಂದು ಎಕ್ಸ್ ನಲ್ಲಿ ಒಬ್ಬರು "ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು?" ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಉಡುಪಿಯ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಕೀರ್ತನ್ ಉಪಾಧ್ಯ ಅವರು " ಮುಸ್ಲಿಂ ಸಮುದಾಯ' ಎಂದು ಉತ್ತರಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ಈಗ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದಾರೆ.