PC : x/@ANIಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ(ಈ.ಡಿ.) ವಶಕ್ಕೆ ಪಡೆದಿರುವ ಬೆನ್ನಲ್ಲೇ, ಈ.ಡಿ.ಯಿಂದ ಬಂಧನ ಭೀತಿ ಎದುರಿಸುತ್ತಿದ್ದ ನಿಗಮದ ಅಧ್ಯಕ್ಷ, ರಾಯಚೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಸೋಮವಾರ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿದ್ದ ಬಸನಗೌಡ ದದ್ದಲ್ ಮನೆ ಮೇಲೆ ಈ.ಡಿ. ಅಧಿಕಾರಿಗಳು ಜು.10ರಂದು ದಾಳಿ ಮಾಡಿದ್ದರು. ಶುಕ್ರವಾರ ವಿಶೇಷ ತನಿಖಾ ದಳದ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ಬಸನಗೌಡ ದದ್ದಲ್, ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಅಲ್ಲದೆ, ಬಸನಗೌಡ ದದ್ದಲ್ ನಾಪತ್ತೆ ವಂದತಿ ಹಬ್ಬಿತ್ತು. ಆದರೆ, ಇಂದು(ಜು.15) ದದ್ದಲ್ ಕಲಾಪಕ್ಕೆ ಹಾಜರಾಗಿದ್ದಾರೆ.ವಿಧಾನಮಂಡಲ ಅಧಿವೇಶನದ ಅವಧಿಯಲ್ಲಿ ಶಾಸಕರನ್ನು ಬಂಧಿಸಬೇಕಾದರೆ ವಿಧಾನಸಭೆ ಅಧ್ಯಕ್ಷರ ಅನುಮತಿ ಅಗತ್ಯ. ನಾನೂ ಎಲ್ಲೂ ನಾಪತ್ತೆಯಾಗಿಲ್ಲ :‘ನಾನು ಎಲ್ಲೂ ನಾಪತ್ತೆಯಾಗಿಲ್ಲ. ಇಷ್ಟು ದಿನ ನಮ್ಮೊರಿನಲ್ಲಿದ್ದೆ. ವಿಧಾನ ಮಂಡಲ ಅಧಿವೇಶನ ಕಲಾಪಕ್ಕೆ ಹಾಜರಾಗಲು ಬಂದಿದ್ದೇನೆ’ ಎಂದು ಬಸನಗೌಡ ದದ್ದಲ್ ಸ್ಪಷ್ಟಪಡಿಸಿದ್ದಾರೆ.  ಸೋಮವಾರ ಇಲ್ಲಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸನಗೌಡ ದದ್ದಲ್, ‘ನಾನು ಊರಿನಲ್ಲೇ ಇದ್ದೆ, ಎಲ್ಲಿಗೂ ಹೋಗಿಲ್ಲ. ನನಗೆ ಈಡಿ ಸೇರಿದಂತೆ ತನಿಖಾ ಸಂಸ್ಥೆಗಳಿಂದ ಯಾವುದೇ ನೋಟಿಸ್ ಬಂದಿಲ್ಲ. ಇದೀಗ ವಿಧಾನಸಭೆ ಅಧಿವೇಶನ ಕಲಾಪಕ್ಕೆ ಹೋಗುತ್ತಿದ್ದೇನೆ. ನಾನು ನಾಪತ್ತೆಯಾಗಿರಲಿಲ್ಲ’ ಎಂದು ವಿವರಣೆ ನೀಡಿದರು.  