ಬೆಂಗಳೂರು : 68 ವರ್ಷದ ಇತಿಹಾಸವಿರುವ ಶಕ್ತಿ ಕೇಂದ್ರ ವಿಧಾನಸೌಧದ ಸದನಕ್ಕೆ ಪ್ರವೇಶಿಸುವಲ್ಲಿಗೆ ಆಕರ್ಷಕ ಮರದ ದ್ವಾರ ಅಳವಡಿಸಲಾಗಿದೆ. ಜು.15ರಂದು ಸೋಮವಾರ ವಿಧಾನ ಸಭಾ ಕಲಾಪ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ನೂತನ ಪ್ರವೇಶ ದ್ವಾರವನ್ನು ಉದ್ಘಾಟಿಸಲಿದ್ದಾರೆ. ಕೆಂಗಲ್ ಹನುಮಂತಯ್ಯ ಅವರ ದೂರದೃಷ್ಠಿಯ ವಿಧಾನ ಸಭೆಯ ಆಂತರಿಕ ಅಲಂಕಾರಕ್ಕೂ ಸ್ಪೀಕರ್ ಯು.ಟಿ.ಖಾದರ್ ಅವರು ಆದ್ಯತೆ ನೀಡಿ, ಸದನಕ್ಕೆ ಪ್ರವೇಶಿಸುವಲ್ಲಿ ಮರದ ನೂತನ ಪ್ರವೇಶ ದ್ವಾರ ಸಿದ್ಧಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದಿಂದ ಬೀಟೆಮರ ಮತ್ತು ತೇಗದಮರ ಪಡೆದು ಸ್ವಾಗತ ದ್ವಾರಗಳಿಗೆ ಆಕರ್ಷಕ ವಿನ್ಯಾಸ ನೀಡಲಾಗಿದೆ. ಈ ಹಿಂದೆ ದೇಶ ವಿದೇಶದ ವಿಶೇಷ ಆಹ್ವಾನಿತರು ವಿಧಾನಸೌಧಕ್ಕೆ ಭೇಟಿ ನೀಡುವಾಗ ಧೂಳು ಹಿಡಿದಿರುವ ಹಳೆಯ ಕಾರಿಡಾರ್, ಬಾಗಿಲುಗಳು ಅವರನ್ನು ಸ್ವಾಗತಿಸುತ್ತಿದ್ದವು. ಇದಕ್ಕೆ ಬದಲಾವಣೆ ತರಲು ಬಯಸಿದ ಸ್ಪೀಕರ್ ಯು.ಟಿ.ಖಾದರ್ ಅವರು ಹೊಸ ರೂಪ ನೀಡಿದ್ದಾರೆ. ಪ್ರಸಕ್ತ ವಿಐಪಿಗಳು, ಸಚಿವರು ಸಾಗುವ ಪೂರ್ವ ಮತ್ತು ಪಶ್ಚಿಮದ ಮುಖ್ಯದ್ವಾರಗಳು ಸಾಂಪ್ರದಾಯಿಕ ಶೈಲಿಯ ಮರದ ಕೆತ್ತನೆಯಿಂದ ನಳನಳಿಸುತ್ತಿದೆ. ನೆಲಕ್ಕೆ ಹಸಿರು ಮಕಮಲ್ಲು, ಮಹಡಿ ಏರುವ ಮೆಟ್ಟಿಲುಗಳಿಗೆ ಕೆಂಪು ಕಾರ್ಪೆಟ್ ಹಾಸಲಾಗಿದೆ. ಕಲಾಪ ನಡೆಯುವೆಡೆ ಮತ್ತು ಗೋಡೆಯ ಖಾಲಿ ಸ್ಥಳಗಳಿಗೆ ರಾಜ್ಯ ಸರಕಾರದ ಲಾಂಛನ  ಗಂಡಬೇರುಂಡ  ಆಕೃತಿಯ ಗಡಿಯಾರ ಅಳವಡಿಸಲಾಗಿದೆ. ಇದು ವಿಧಾನ ಸೌಧದ ಒಳಾಂಗಣಕ್ಕೆ ಆಕರ್ಷಕ ಮೆರುಗು ನೀಡಿದೆ.  ಜು.15 ಸೋಮವಾರ ವಿಧಾನಸಭೆಯ ಕಲಾಪ ಆರಂಭವಾಗುವ ಮುಂಚಿತವಾಗಿ ಸಿಎಂ ಪ್ರವೇಶ ದ್ವಾರವನ್ನು ಉದ್ಘಾಟಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.