PC : x/@drmcsudhakarಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರತಿವರ್ಷ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿಸುವ (ಸಿಬಿಟಿ) ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕೆಇಎ ಅಧ್ಯಕ್ಷ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.  ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ-ಸೆಟ್ 23ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ʼಮಹಾರಾಷ್ಟ್ರ ಮತ್ತಿತರ ಒಂದೆರಡು ರಾಜ್ಯಗಳಲ್ಲಿ ಅಲ್ಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಿರುವುದನ್ನು ಅಧ್ಯಯನ ಮಾಡಲಾಗಿದೆ. ಸಿಇಟಿಯನ್ನು ಕಂಪ್ಯೂಟರ್ ಆಧರಿಸಿ ನಡೆಸಲು ಹೆಚ್ಚಿನ ಮೂಲಸೌಕರ್ಯವೂ ಅಗತ್ಯವಿರುತ್ತದೆ.  ಒಟ್ಟಾರೆ, ಸಾಧಕ ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆʼ ಎಂದು ವಿವರಿಸಿದರು.  ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆಯ ಮೂಲಸೌಕರ್ಯಕ್ಕಾಗಿ ಸರಕಾರ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಈ ಸಂಪನ್ಮೂಲದ ಸದುಪಯೋಗ ಪೂರ್ಣ ಪ್ರಮಾಣದಲ್ಲಿ ಆಗುತ್ತದೆಯೇ ಎಂಬ ಬಗ್ಗೆಯೂ ಆಲೋಚಿಸಬೇಕಾಗುತ್ತದೆ ಎಂದು ಅವರು ಹೇಳಿದರು.  ಸಿಇಟಿ ಅರ್ಜಿ ತುಂಬುವ ಹಂತದಲ್ಲಿ, ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇನ್ನೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ವಿದ್ಯಾರ್ಥಿಗಳು ಬಹುತೇಕ ಸೈಬರ್ ಸೆಂಟರುಗಳಿಗೆ ಹೋಗಿ ಅರ್ಜಿ ತುಂಬುತ್ತಿದ್ದು, ಗ್ರಾಮೀಣ ವಿದ್ಯಾರ್ಹತೆ, ಮೀಸಲಾತಿ ಮತ್ತಿತರ ಮಾಹಿತಿಗಳನ್ನು ನೀಡುವಾಗ ಹೆಚ್ಚಿನ ಪ್ರಮಾಣದಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ ಎಂದರು.  ಸಿಇಟಿ ಅರ್ಜಿ ತುಂಬುವ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಪೂರ್ವ ತಯಾರಿ ನೀಡಲು ಆ್ಯಪ್‌ ಒಂದನ್ನು ಸಿದ್ಧಪಡಿಸಲಾಗುತ್ತಿದೆ. ಇದು, ಬಹುಮಟ್ಟಿಗೆ ಕೊನೆಯ ಹಂತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರ ಜತೆಗೆ ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡಿಸುವ ಉದ್ದೇಶವೂ ಇದೆ  ಎಂದು ಸಚಿವರು ತಿಳಿಸಿದರು.ಕೆ-ಸೆಟ್‍ನಲ್ಲಿ ಅರ್ಹರಾದವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಳ್ಳಲು ಸರಕಾರವು ಆದ್ಯತೆ ಮೇರೆಗೆ ಗಮನ ನೀಡಲಿದೆ. ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ನಂತರ ನೇಮಕಾತಿ ಆಗಲಿದೆ. ಜೊತೆಗೆ, ಮುಂಬರುವ ದಿನಗಳಲ್ಲಿ ಮಂಜೂರಾತಿ ಹುದ್ದೆಗಳು ಹಾಗೂ ಅತಿಥಿ ಬೋಧಕರ ನಡುವಿನ ಅಂತರವನ್ನು ತಗ್ಗಿಸುವುದಕ್ಕೂ ಒತ್ತು ಕೊಡಲಾಗುತ್ತದೆ ಎಂದರು.  ವೆಬ್ ಕಾಸ್ಟಿಂಗ್ ಬಗ್ಗೆ ಮೆಚ್ಚುಗೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳನ್ನು ಸಮರ್ಥವಾಗಿ ನಡೆಸುತ್ತಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ), ಮುಖಚಹರೆ ಗುರುತಿಸುವಿಕೆ, ಬೆರಳಚ್ಚು ಬಳಕೆ, ಬಯೋಮೆಟ್ರಿಕ್ಸ್ ಮತ್ತಿತರ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು, ವೆಬ್ ಕಾಸ್ಟಿಂಗ್ ಮೂಲಕ ನಿಯಂತ್ರಣ ಮಾಡುತ್ತಿರುವುದು ಉತ್ತಮ ಕ್ರಮವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.   ಇದೇ ವೇಳೆ, ಸಚಿವರು, ನಿಗಮ, ಮಂಡಳಿಗಳ ಹುದ್ದೆಗಳನ್ನು ತುಂಬಲು  ಶನಿವಾರ ಆರಂಭವಾದ ಎರಡು ದಿನಗಳ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಇಲ್ಲಿನ ಕಮಾಂಡ್ ಸೆಂಟರ್ ನಲ್ಲಿ ಅಳವಡಿಸಲಾಗಿರುವ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.  ಸುಪ್ರೀಂ ಆದೇಶದ ನಂತರ ತೀರ್ಮಾನ: ‘ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಅದರ ಅಂತಿಮ ಆದೇಶ ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು’ ಎಂದು ಸಚಿವ ಡಾ.ಸುಧಾಕರ ಹೇಳಿದರು.