ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಈ.ಡಿ. ದಾಳಿಯಿಂದ ಇನ್ನಷ್ಟು ಕರ್ಮಕಾಂಡಗಳು ಹೊರಕ್ಕೆ ಬರಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.ಗುರುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಬುಡಕಟ್ಟು ಸಮುದಾಯ, ಪರಿಶಿಷ್ಟ ಸಮುದಾಯಕ್ಕೆ ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಪಡಿಸುವ ಉದ್ದೇಶದಿಂದ ರಚಿಸಲಾಗಿತ್ತು. ನಿಗಮದಲ್ಲಿ ಆಗಿರುವ  ಹಗರಣ ಸಂಬಂಧ ಹಲವು ತಿಂಗಳಿನಿಂದ ಬಿಜೆಪಿ ಹೋರಾಟ ನಡೆದಿದೆ. ನಾಗೇಂದ್ರ ಅವರ ಮನೆಯ ಮೇಲೆ, ಆಸ್ತಿಗಳ ಮೇಲೆ ಈ.ಡಿ. ದಾಳಿ ಮಾಡಿದೆ. ಅನೇಕ ದಾಖಲಾತಿಗಳ ಪರಿಶೀಲನೆ ನಡೆಸಿದೆ ಎಂದು ಹೇಳಿದರು.  ಒಂದೆಡೆ ಎಸ್‍ಐಟಿ ವಿಚಾರಣೆಯೂ ಇದೆ. ಈ.ಡಿ. 18 ಕಡೆಗಳಲ್ಲಿ ದಾಳಿ ನಡೆಸಿದೆ. ಯೂನಿಯನ್ ಬ್ಯಾಂಕಿನವರು ಸಿಬಿಐಗೆ ದೂರು ಕೊಟ್ಟ ಕಾರಣ ಅದರ ಆಧಾರದಲ್ಲಿ ಈ.ಡಿ. ದಾಳಿ ನಡೆಯುತ್ತಿರಬಹುದು. ನಾಗೇಂದ್ರ ಅವರ ಪಿ.ಎ. ಆಗಿದ್ದ ಹರೀಶ್ ಎಂಬವರ ಖಾತೆಗೆ 80 ಲಕ್ಷ ರೂ. ವರ್ಗಾವಣೆ ಆಗಿದೆ ಎಂದ ಅವರು, ಈ.ಡಿ.ಯನ್ನು ಆಹ್ವಾನಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ದಾಳಿ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಸರಕಾರವು ಈ ದೊಡ್ಡ ಹಗರಣದ ಭಾಗೀದಾರ ಎಂದು ಅವರು ಆರೋಪಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ರಾಜು ಗೌಡ, ಎಸ್.ಟಿ. ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಶಾಂತರಾಮ ಸಿದ್ದಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಉಪಸ್ಥಿತರಿದ್ದರು.  