ಬೆಂಗಳೂರು: ದ್ವೇಷದ ಭಾಷಣ ಮಾಡಿದ ಆರೋಪದ ಮೇಲೆ ರೇಣುಕಾಚಾರ್ಯ, ಸಿಟಿ ರವಿ, ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಸೇರಿದಂತೆ ಹಲವು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.‌ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಆಪಾದಿತ ಭಾಷಣಗಳನ್ನು ಮಾಡಿದ್ದಾರೆ.‌ ಹೀಗಾಗಿ ಇವರ ವಿರುದ್ಧದ ಕ್ರಮ ತೆಗೆದುಕೊಳ್ಳಲು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಸಿವಿಲ್ ಗುತ್ತಿಗೆದಾರ ಅರ್ಜಿದಾರ ಮೊಹಮ್ಮದ್ ಖಲೀಯುಲ್ಲಾ ಅವರು ಮನವಿ ಮಾಡಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠವು, ಆರೋಪಗಳು ತುಂಬಾ ಸಾಮಾನ್ಯವಾಗಿದ್ದು, ದೃಢೀಕರಣದ ಕೊರತೆಯನ್ನು ಕಂಡುಬಂದಿದೆ. ಮಾತ್ರವಲ್ಲ ಪಿಐಎಲ್ ರಾಜಕೀಯ ಪ್ರೇರಿತ ಎಂದು ತೋರುತ್ತದೆ ಎಂದು ಅಭಿಪ್ರಾಯಪಟ್ಟು ಪಿಐಎಲ್ ವಜಾಗೊಳಿಸಿದೆ.