ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರಿಯಾಣ ಚುನಾವಣೆಯಲ್ಲಿ ʼಮುಡಾʼದ ಬಗ್ಗೆ ಮಾತನಾಡುವ ಮೊದಲು ಬಿಜೆಪಿ‌ ಪಕ್ಷದಲ್ಲಿರುವ ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಗೊಳ್ಳಲಿ. ಅವರ ಪಕ್ಷದಲ್ಲೇ ರಾಶಿ, ರಾಶಿ ಭ್ರಷ್ಟಾಚಾರಿಗಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.  ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು, ಕಾರ್ಯಕರ್ತರ ಜೊತೆ ಸುಮಾರು ಎರಡು ಗಂಟೆ ಕಾಲ ಮಾತನಾಡಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.  "ಹಿಂಡನ್ ಬರ್ಗ್‌ ವಿಚಾರದಲ್ಲಿ ಪ್ರಧಾನಮಂತ್ರಿ ಮೋದಿಯವರು ಯಾಕೆ ಮೌನ ವಹಿಸಿದ್ದಾರೆ. ಮಣಿಪುರದಲ್ಲಿ ನಡೆದ ಹಿಂಸೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಮಣಿಪುರಕ್ಕೆ ಯಾಕೆ ಭೇಟಿ ನೀಡಿಲ್ಲ" ಎಂದು ಪ್ರಶ್ನಿಸಿದರು.  ಸುಳ್ಳು ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ :ʼಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ  ನೀಡಿರುವ ಹೇಳಿಕೆಗಳು ಸುಳ್ಳಿನಿಂದ ಕೂಡಿದ್ದು, ಅವರ ಎಲ್ಲ ಮಾತಿಗೆ ಪ್ರತಿಕ್ರಿಯೆ ನೀಡುವುದು ಅವಶ್ಯಕತೆಯಿಲ್ಲʼ ಎಂದರು.