ಬೆಂಗಳೂರು : ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕಾಂಗ್ರೆಸ್‌ ಸರಕಾರವು ನಂದಿನಿ ಹಾಲಿನ ದರವನ್ನು ಲೀಟರ್ ಗೆ ಎರಡು ರೂ. ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, "ಸಿಎಂ ಸಿದ್ದರಾಮಯ್ಯನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್ ನಲ್ಲಿ  3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ 2 ರೂಪಾಯಿ ಹೆಚ್ಚಾಗಿದೆ.  ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು"ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ. ನಿಮಗೆ ಬಡವರು, ಮಾಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ" ಎಂದು ಆರ್‌.ಅಶೋಕ್‌ ಆಗ್ರಹಿಸಿದರು. 