ಬೆಂಗಳೂರು : ಬೆಂಗಳೂರಿನ ಕೆಐಓಸಿಎಲ್ ಸಂಸ್ಥೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಾಗಿರುವ ಅರಣ್ಯ ತಿರುವಳಿಯನ್ನು ಅನುಷ್ಠಾನಗೊಳಿಸದಂತೆ, ಅಂದರೆ ‘ಅರಣ್ಯ ತಿರುವಳಿ ಗುತ್ತಿಗೆ ಪತ್ರ’ ಮಾಡಿಕೊಳ್ಳದಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ ನೀಡಿದ್ದಾರೆ.  ಈ ಸಂಬಂಧ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಕೆಐಓಸಿಎಲ್ ಸಂಸ್ಥೆಗೆ ಅರಣ್ಯ ಭೂಮಿಯನ್ನು ಹಸ್ತಾಂತರಿಸದಂತೆ ಸಂಬಂಧಿಸಿದವರಿಗೆ ಕೂಡಲೆ ಅಗತ್ಯ ಸೂಚನೆಗಳನ್ನು ನೀಡುವಂತೆ ತಿಳಿಸಿದ್ದಾರೆ.  ಕೆಐಓಸಿಎಲ್ ಸಂಸ್ಥೆಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ದೇವದಾರಿ ಹಿಲ್ ಪ್ರದೇಶದಲ್ಲಿ 401.5761 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಅರಣ್ಯ ತಿರುವಳಿಪಡೆದಿದ್ದು, ಅರಣ್ಯ ಇಲಾಖೆಯಿಂದ ‘ಅರಣ್ಯ ತಿರುವಳಿ ಗುತ್ತಿಗೆ ಪತ್ರ’ ಸಹಿಯೂ ಸೇರಿದಂತೆ ಜಮೀನು ಹಸ್ತಾಂತರ ಬಾಕಿ ಇರುವುದನ್ನು ಗಮನಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.  ಈ ಸಂಸ್ಥೆಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಗಣಿಗಾರಿಕೆಯ ಲೋಪದೋಶ, ಅರಣ್ಯ ಕಾಯ್ದೆ ಉಲ್ಲಂಘನೆಗಳಿಗಾಗಿ ಸಿಇಸಿಯು ನೀಡಿರುವ ನಿರ್ದೇಶನಗಳನ್ನು ನಿಗದಿತ ಕಾಲಮಿತಿಯಲ್ಲಿ ಸಂಪೂರ್ಣವಾಗಿ ಜಾರಿ ಮಾಡಲು ವಿಫಲವಾಗಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ ಎಂದು ಅವರು ಹೇಳಿದ್ದಾರೆ.  ಆದುದರಿಂದ, ಕೆಐಓಸಿಎಲ್ ಸಂಸ್ಥೆಯು ಸಿಇಸಿ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವವರೆಗೆ, ಈ ಸಂಸ್ಥೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಾಗಿರುವ ಅರಣ್ಯ ತಿರುವಳಿಯನ್ನು ಅನುಷ್ಠಾನಗೊಳಿಸದಂತೆ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.  