Photo: X/Dineshgunduraoಮೈಸೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮರಣೋತ್ತರ ವರದಿ  ತಿರುಚವ ಪ್ರಯತ್ನ ನಡೆಯುತ್ತಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಮಾತೇ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, " ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ. ತನಿಖೆಗೆ ಸರಕಾರ ಎಲ್ಲಾ ರೀತಿಯ ಸಹಕಾರ ಕೊಡುತ್ತಿದೆ. ತಪ್ಪಿತಸ್ಥರಿಗೆ ತಕ್ಕ  ಶಿಕ್ಷೆ ಆಗಬೇಕು ಎಂಬುದು ಎಲ್ಲರ ಬಯಕೆ" ಎಂದು ಹೇಳಿದರು.ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು:ʼಕೋಪದಲ್ಲಿ ಇಂತಹ ಘಟನೆಗಳು ಆಗುತ್ತವೆ, ಈ ಹಿಂದೆಯೂ ಆಗಿವೆ. ಸರಕಾರಗಳು ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾನೇ ಸರಿ, ನಾನು ಮಾಡಿದ್ದೇ ಸರಿ ಎನ್ನುವ ಅತಿರೇಕದ ವರ್ತನೆ ಜಾಸ್ತಿಯಾದಾಗ ಈ ರೀತಿಯ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳು ಸಮಾಜಕ್ಕೆ ಒಳ್ಳೆಯದಲ್ಲʼ ಎಂದರು.ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರದ ಕುರಿತು ಮಾತನಾಡಿದ ಅವರು, ʼಬೇರೆ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಬೆಲೆ ಕಡಿಮೆ ಇದೆ. ಕೇಂದ್ರ ಸರಕಾರ ಈ ಹಿಂದೆ ಬೊಮ್ಮಾಯಿ ಮೇಲೆ ಒತ್ತಡ ತಂದು ಬೆಲೆ ಇಳಿಕೆ ಮಾಡಿದರು. ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಲಿಸಿದರೆ  ನಮ್ಮಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಇದೆʼ ಎಂದು ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.