ಬೆಂಗಳೂರು: ಹಾಸನ ಮಾಜಿ ಸಂಸದ  ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ  ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಮೂರ್ತಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಿ ಆದೇಶಿದೆ.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ. ಆರ್ ಮೋಹನ್ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದಿದೆ. ಘಟನೆಗೆ ಸಂಬಂಧಿಸಿದಂತೆ ಸಾಕ್ಷಾೃಧಾರಗಳನ್ನು ಪೊಲೀಸ್ ಠಾಣೆಗೆ ಸಲ್ಲಿಸಿದರು. ಎಸ್‌ಐಟಿ ಸಮರ್ಪಕವಾಗಿ ತನಿಖೆ ನಡೆಸುವಲ್ಲಿ ಎಡವಿದೆ. ಅದರಿಂದ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಮನವಿ ಮಾಡಿದರು.ವಾದ ಆಲಿಸಿದ ನ್ಯಾಯಪೀಠ, ಸರ್ಕಾರ ಇದಾಗಲೇ ಎಸ್‌ಐಟಿ ರಚನೆ ಮಾಡಿದೆ. ಪ್ರಕರಣ ಕುರಿತು ನಿಮ್ಮ ಅಸಮಾಧಾನ ಏನೇ ಇದ್ದರೂ ಆ ಬಗ್ಗೆ ಎಸ್‌ಐಟಿ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳಬಹುದಾಗಿದೆ. ನೀವು ಮೊದಲು ಎಸ್‌ಐಟಿ ಗೆ ಮನವಿ ಸಲ್ಲಿಸಿ ಎಂದು ಸೂಚಿಸಿ ಅರ್ಜಿ ಇತ್ಯರ್ಥ ಪಡಿಸಿ ಆದೇಶಿಸಿದೆ.