ಮೈಸೂರು : ಇಲ್ಲಿ ಗುಜರಿ ಅಂಗಡಿಯೊಂದರಲ್ಲಿ ಕ್ಲೋರಿನ್ ಮತ್ತು ಅಮೋನಿಯಂ ವಿಷಾನಿಲ ಸೋರಿಕೆಯಾಗಿ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ನಗರದ ಹಳೆ ಕೆಸರೆ ಬಳಿ ಶುಕ್ರವಾರ ಸಂಜೆ ವರದಿಯಾಗಿದೆ.ಅಸ್ವಸ್ಥರಾದವರನ್ನು ಸಮೀಪದ ಎರಡು ಖಾಸಗಿ ಆಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.ಅಸ್ವಸ್ಥರಾದವರನ್ನು ರಫಿ, ಸುಹೇಲ್ ಪಾಷ, ಅರ್ಷದ್, ಸುಲ್ತಾನ್, ಶಾಬಾಝ್, ವಾಹಿದ್ ಪಾಷಾ, ಸಲ್ಮಾಬಾನು, ಅಸ್ಮಾಬಾನು, ಆಯಿಷಾ ಬಾನು, ನೋಮನ್, ನಜ್ಮಾ ಸೇರಿದಂತೆ ಇನ್ನೂ ಹಲವರು ಎಂದು ಗುರುತಿಸಲಾಗಿದೆ.ಹಳೆ ಕೆಸರೆ ಬಳಿ ವರುಣಾ ಮೇಲ್ಗಾಲುವೆ ಹತ್ತಿರ ಇರುವ ಮಹಬೂಬ್ ಎಂಬವರಿಗೆ ಸೇರಿದ ಗುಜರಿ ಅಂಗಡಿಯೊಂದರಲ್ಲಿ ಹಳೇ ಕಬ್ಬಿಣದ ಸಾಮಾನುಗಳನ್ನು ತೆರವು ಮಾಡುವಾಗ ಕ್ಲೋರಿನ್ ಮತ್ತು ಅಮೋನಿಯಂ ಇದ್ದ ಸಿಲಿಂಡರ್‌ಗಳನ್ನು ಅವುಗಳು ಖಾಲಿ ಎಂದು ತಿಳಿದು ಕಾರ್ಮಿಕರು ತೆರವು ಮಾಡಿದಾಗ ಅದರಲ್ಲಿದ್ದ ವಿಷಾನಿಲ ಸೋರಿಕೆಯಾಗಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಅಸ್ವಸ್ಥಗೊಂಡರು. ಕೂಡಲೇ ಅವರನ್ನು ರಿಂಗ್ ರಸ್ತೆಯಲ್ಲಿರುವ ಪ್ರಜ್ವಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಮತ್ತಷ್ಟು ಅನಿಲ ಸೋರಿಕೆಯಾಗಿ ಗಾಳಿಯಲ್ಲಿ ಹರಡಿದ್ದರಿಂದ ಅಕ್ಕಪಕ್ಕದ ಹಲವಾರು ಗುಜರಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೂ ಉಸಿರಾಟದಲ್ಲಿ  ತೊಂದರೆಯಾದ ಕಾರಣ ಅವರನ್ನೂ ಕೂಡ ಆಸ್ಪತ್ರೆಗಳಿಗೆ ರವಾನೆ ಮಾಡಲಾಯಿತು.  ಅಸ್ವಸ್ಥರಾದವರಿಗೆ ಎದೆ ಉರಿ, ಉಸಿರಾಟಕ್ಕೆ ತೊಂದರೆಯಾಗಿದ್ದು, ಎಲ್ಲರಿಗೂ ಆಕ್ಸಿಜನ್ ನೀಡಲಾಯಿತು. ಹಳೆ ಕೆಸರೆ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದವರೂ ಘಟನೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆಯ ವೈದ್ಯರ ತಂಡ ಎರಡು ಆಂಬುಲೆನ್ಸ್ ಸಮೇತ ಸ್ಥಳದಲ್ಲೆ ಬೀಡುಬಿಟ್ಟಿದ್ದು, ಮುನ್ನೆಚ್ಚರಿಕೆ ವಹಿಸಿದೆ. ಅಸ್ವಸ್ಥರಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗಳಿಗೆ ರವಾನೆ ಮಾಡಲಾಗುತ್ತಿದೆ. ಪೊಲೀಸರು ಪ್ರಜ್ವಲ್ ಆಸ್ಪತ್ರೆಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.