ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಭೀಕರವಾಗಿ ಹತ್ಯೆಗೀಡಾಗಿದ್ದ ಮಹಾಲಕ್ಷ್ಮಿ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರಂಜನ್ ಬೆಂಗಳೂರಿನಿಂದ ಪರಾರಿಯಾದ ಕೇವಲ ಒಂದು ವಾರದ ಅಂತರದಲ್ಲಿ ಈ ಘಟನೆ ನಡೆದಿದೆ.ಶಂಕಿತ ಆರೋಪಿಯ ಮೃತದೇಹದ ಬಳಿ ಆತ್ಮಹತ್ಯೆ ಪತ್ರವನ್ನು ಪತ್ತೆ ಹಚ್ಚಿರುವ ಪೊಲೀಸರಿಗೆ, ಮಹಾಲಕ್ಷ್ಮಿಯನ್ನು ಹತ್ಯೆಗೈಯ್ಯುವುದಕ್ಕೂ ಮುನ್ನ ತಮ್ಮಿಬ್ಬರ ನಡುವೆ ಭಾರಿ ವಾಗ್ವಾದ ನಡೆದಿತ್ತು ಎಂದು ರಂಜನ್ ನಮೂದಿಸಿರುವುದು ಕಂಡು ಬಂದಿದೆ. ವೈಯಾಲಿ ಕಾವಲ್ ನ ಮೃತ ಮಹಾಲಕ್ಷ್ಮಿ ನಿವಾಸದಲ್ಲಿ ಈ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ. ಮಹಾಲಕ್ಷ್ಮಿ ಮತ್ತು ರಂಜನ್ ನಡುವಿನ ವಾಗ್ವಾದವು ವಿಕೋಪಕ್ಕೆ ತಲುಪಿದ್ದು, ರಂಜನ್ ಮಹಾಲಕ್ಷ್ಮಿ ತಲೆಗೆ ಬಲವಾಗಿ ಹೊಡೆದಿದ್ದರಿಂದ ಆಕೆ ಮೃತಪಟ್ಟಳು ಎನ್ನಲಾಗಿದೆ. ಇದಲ್ಲದೆ, ತಮ್ಮಿಬ್ಬರ ನಡುವೆ ಇದ್ದ ಆಪ್ತ ಸಂಬಂಧದ ಕುರಿತೂ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ರಂಜನ್ ಮೃತದೇಹವು ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದಕ್ಕೂ ಮುನ್ನ, ಮಹಾಲಕ್ಷ್ಮಿಯ ಮೃತ ದೇಹವನ್ನು ತುಂಡುತುಂಡಾಗಿ ಕತ್ತರಿಸಿದ್ದ ಆರೋಪಿಯು, ಅದನ್ನು ರೆಫ್ರಿಜರೇಟರ್ ನಲ್ಲಿ ತುರುಕಿ, ಸ್ಥಳದಿಂದ ಪರಾರಿಯಾಗಿದ್ದ. ಸೆಪ್ಟೆಂಬರ್ 21ರಂದು ಮಹಾಲಕ್ಷ್ಮಿಯ ತುಂಡುತುಂಡಾದ ಮೃತದೇಹವನ್ನು ಆಕೆಯ ನಿವಾಸದ ರೆಫ್ರಿಜರೇಟರ್ ನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.