ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಆರೋಪಿಗಳಿಬ್ಬರ ವಿರುದ್ಧ ಮತ್ತೊಂದು ಚಾರ್ಜ್‍ಶೀಟ್ ಸಲ್ಲಿಕೆ ಮಾಡಿರುವುದಾಗಿ ವರದಿಯಾಗಿದೆ.ಆರೋಪಿಗಳಾದ ಅಬ್ದುಲ್ ಮತೀನ್ ಅಹ್ಮದ್ ತಾಹಾ ಮತ್ತು ಮುಸ್ಸಾವೀರ್ ಹುಸೇನ್ ಶಾಜಿಬ್ ಎಂಬುವರ ವಿರುದ್ಧ ಈ ಹಿಂದೆಯೂ ಎನ್‍ಐಎ ಚಾರ್ಜ್‍ಶೀಟ್ ಸಲ್ಲಿಸಿತ್ತು. ಇದೀಗ ಮತ್ತೊಂದು ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ.  ಆರೋಪಿಗಳು ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾಗಿದ್ದು, ಯುವಕರನ್ನು ಮೂಲಭೂತವಾದಿ ಚಟುವಟಿಕೆಗಳಿಗೆ ಸೆಳೆದು ಪ್ರಚೋದನೆ ನೀಡುತ್ತಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.  ಈ ಇಬ್ಬರು ಆರೋಪಿಗಳ ವಿರುದ್ಧ ಎನ್‍ಐಎ ಸಲ್ಲಿಸಿರುವ ಮೂರನೇ ಚಾರ್ಜ್‍ಶೀಟ್ ಇದಾಗಿದ್ದು, ಇದರೊಂದಿಗೆ ಪ್ರಕರಣದಲ್ಲಿ ಈವರೆಗೆ 10 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದಂತಾಗಿದೆ.  