ಸಾಂದರ್ಭಿಕ ಚಿತ್ರ ಬೆಂಗಳೂರು: ಕೈ ಹಾಗೂ ಕತ್ತು ಸೀಳಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪ್ರಭುದ್ಯಾಳ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಠಾಣಾ ಪೊಲೀಸರು ಓರ್ವ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ.ಏನಿದು ಘಟನೆ?:  ಮೇ.15ರಂದು ನಗರದ ಬೃಂದಾವನ ಲೇಔಟ್‍ನಲ್ಲಿ ಮನೆಯೊಂದರ ಸ್ನಾನದ ಕೋಣೆಯಲ್ಲಿ ಕೈ ಹಾಗೂ ಕತ್ತು ಸೀಳಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪ್ರಭುದ್ಯಾ ಶವ ಪತ್ತೆಯಾಗಿತ್ತು. ಇದನ್ನು ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಬಳಿಕ ಮೃತಳ ತಾಯಿ ಸೌಮ್ಯ ಎಂಬುವರು ನೀಡಿದ ದೂರಿನ ಮೇಲೆ ಐಪಿಸಿ ಸೆಕ್ಷನ್ 302ರಡಿ ಕೊಲೆ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಭುದ್ಯಾ ತಲೆಗೆ ಹೊಡೆದು, ಕತ್ತು ಕೊಯ್ದು, ಮುಖಕ್ಕೂ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಮೃತಳ ತಾಯಿ ಸೌಮ್ಯ ಆರೋಪಿಸಿದ್ದರು.  ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ನಗರದ ಸುಬ್ರಮಣ್ಯಪುರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ಒಂದೆಡೆ ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆ ಹಾಗೂ ಮತ್ತೊಂದೆಡೆ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.  ಸಿಸಿಟಿವಿಯಲ್ಲಿ ಅನುಮಾನಸ್ಪದವಾಗಿ ಕಂಡು ಬಂದವರನ್ನೂ ಕೂಡಲೇ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಸದ್ಯ ಓರ್ವನನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  