ಧಾರವಾಡ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಹೋರಾಟಕ್ಕೆ ನಿರ್ಧರಿಸಲಾಗಿದ್ದು, ಈ ಸಂಬಂಧ ಗುರುವಾರ(ಮೇ.23) ಹೋರಾಟದ ಸಭೆ ನಡೆಯಲಿದೆ ಎಂದು ಕೂಡಲ ಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.ಬುಧವಾರ ಧಾರವಾಡದ ಲಿಂಗಾಯತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿನ ಸಲಹೆ ಕೇಳಿ ಮುಂದಿನ ಹೆಜ್ಜೆ ಇಡಲಾಗುವುದು. ನೀತಿ ಸಂಹಿತೆ ಮುಗಿದ ಬಳಿಕ ಮತ್ತೊಂದು ಸಭೆ ಮಾಡಲಾಗುವುದು. ಜೂನ್ ತಿಂಗಳ ಕೊನೆಯ ವಾರದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಸಭೆ ಮಾಡಲಾಗುವುದು. ಈ ಸಭೆಯಲ್ಲಿ ಸಮಾಜದ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  ಗೆಲ್ಲಲಿಕ್ಕಷ್ಟೇ ಪಂಚಮಸಾಲಿ ಸಮಾಜದ ಜನರನ್ನು ಬಳಸಿಕೊಳ್ಳಬೇಡಿ. ಸಮಾಜದ ಉದ್ಧಾರಕ್ಕೂ ನೀವು ಯತ್ನಿಸಿ. ನಮ್ಮ ಸಮಾಜದ ಎಲ್ಲ ಜನಪ್ರತಿನಿಧಿಗಳು ಮಾತನಾಡಬೇಕು. ಜೂನ್ ತಿಂಗಳಲ್ಲಿ ಮಳೆಗಾಲದ ಅಧಿವೇಶನ ನಡೆಯಬಹುದು. ಆಗ ನಮ್ಮ ಸಮಾಜದ ಎಲ್ಲ ಶಾಸಕರು ಮಾತನಾಡಬೇಕಿದೆ ಎಂದು ಒತ್ತಾಯಿಸಿದರು.