Photo: fbಬೆಂಗಳೂರು: ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ‌ ಪ್ರಯಾಣ (ಶಕ್ತಿ‌ ಯೋಜನೆ) ನೀಡುವುದು ಸರಿಯಲ್ಲ. ಇದರಿಂದ ಮೆಟ್ರೋಗೆ ಕುತ್ತು ಬರುತ್ತದೆ ಎಂಬ  ಪ್ರಧಾನಿ ಮೋದಿಯವರ ಹೇಳಿಕೆ ಅವೈಜ್ಞಾನಿಕ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಚಿವರು, ಶಕ್ತಿ ಯೋಜನೆಯನ್ನು ಜೂನ್ 11, 2023 ರಿಂದ ರಾಜ್ಯದಲ್ಲಿ ಜಾರಿಗೆ ತರಲಾಯಿತು. ಇಂದಿನವರೆಗೆ ಅಂದರೆ ಮೇ 20, 2024 ರವರೆಗೆ ಶಕ್ತಿ ಯೋಜನೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 67.34 ಕೋಟಿ. ಕಳೆದ ಒಂದು ವರ್ಷದಲ್ಲಿ  ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆ ಶೇ.30 ಏರಿಕೆ ಕಂಡಿದೆ. ಜನವರಿ‌ 2023 ರಲ್ಲಿ ಮೆಟ್ರೋ‌ ಪ್ರಯಾಣಿಕರ ಸಂಖ್ಯೆ 1.65 ಕೋಟಿ,‌ ಆದಾಯ  39.15 ಕೋಟಿಯಾಗಿತ್ತು‌, ಅದೇ ಏಪ್ರಿಲ್ 2024 ರಲ್ಲಿ ಪ್ರಯಾಣಿಕರ ಸಂಖ್ಯೆ 2 ಕೋಟಿಗೆ ಏರಿಕೆಯಾಗಿದ್ದು, ಆದಾಯ ರೂ. 51.71 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.2023 ಕ್ಕೆ ಹೋಲಿಸಿದರೆ 2024 ರಲ್ಲಿ ಒಂದು ತಿಂಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಸರಾಸರಿ 35 ಲಕ್ಷ  ಏರಿಕೆ ಮತ್ತು ಆದಾಯದಲ್ಲಿ ರೂ. 1.10 ಕೋಟಿ ಏರಿಕೆ ಕಂಡಿದೆ‌, ಈ ಮೇಲಿನ ಅಂಕಿಅಂಶಗಳಿಂದ ಶಕ್ತಿ ಯೋಜನೆಯಿಂದ ಮೆಟ್ರೋಗೆ ಯಾವ ರೀತಿಯಿಂದಲೂ ಧಕ್ಕೆ‌ ಆಗಿಲ್ಲ, ಬದಲಿಗೆ ಮೆಟ್ರೋ  ಪ್ರಯಾಣಿಕರ ಸಂಖ್ಯೆ‌ ಮತ್ತು ಆದಾಯದಲ್ಲಿ ಗಣನೀಯ ಹೆಚ್ಚಳವಾಗಿರುವುದು ಕಂಡುಬರುತ್ತದೆ.ಆದ್ದರಿಂದ ಉಚಿತ ಪ್ರಯಾಣ ಯೋಜನೆಯಿಂದ ಮೆಟ್ರೋಗೆ ಹೇಗೆ ಧಕ್ಕೆಯಾಗಿದೆ ಎಂಬುದನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಹಾಗೂ ಅತ್ಯಂತ ಯಶಸ್ವಿಯಾಗಿ‌ ಜಾರಿಯಾಗಿರುವ ಶಕ್ತಿ ಯೋಜನೆಯನ್ನು ದೂಷಿಸುವ ಇರಾದೆಯೇ ? ಅಥವಾ ಮಾಹಿತಿ ಕೊರತೆಯೋ? ಗೊತ್ತಿಲ್ಲ. ಶಕ್ತಿ‌ಯೋಜನೆ ನಂತರ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಹಾಗೂ ಮಹಿಳೆಯರ ಸಬಲೀಕರಣ ಮಹತ್ವದ ಯೋಜನೆಯನ್ನು ಪ್ರಧಾನ ಮಂತ್ರಿಯಾದವರು ಈ ರೀತಿಯಾಗಿ ಟೀಕಿಸುವುದು ಸಾಧುವಲ್ಲ ಎಂದು ಹೇಳಿದ್ದಾರೆ.ರಾಜ್ಯದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಬಲಿಷ್ಠವಾಗುತ್ತಿವೆ. ಹೊಸ ಹೊಸ ಬಸ್ಸುಗಳ ಸೇರ್ಪಡೆ ,  ಸಿಬ್ಬಂದಿ ನೇಮಕಾತಿಗೆ ಚಾಲನೆ ಹಾಗೂ ದೇಶ ವಿದೇಶಗಳ ಮಾಧ್ಯಮಗಳಲ್ಲಿಯೂ, ಈ‌  ಯೋಜನೆ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿರುವುದು ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ‌. ಒಟ್ಟಾರೆಯಾಗಿ ಶಕ್ತಿ ಯೋಜನೆಯು  ಪರಿಣಾಮಕಾರಿಯಾಗಿ ಜಾರಿಯಾಗಿ ಸಫಲತೆಯನ್ನು ಕಂಡಿದೆ ಎಂದಿದ್ದಾರೆ.ಪ್ರಧಾನ ಮಂತ್ರಿಗಳು ಪೂರ್ವಗ್ರಹ ಪೀಡಿತರಾಗಿ ಯೋಜನೆಯನ್ನು ದೂಷಿಸುವುದು ಸಮಂಜಸವಲ್ಲ. ಕೇವಲ ಬಿಜೆಪಿ ಘೋಷಿಸುವ ಯೋಜನೆಗಳು ಮಾತ್ರ ಒಳ್ಳೆಯದು ಎಂಬ ಭ್ರಮೆ ಜನರಲ್ಲಿ ಮೂಡಿಸಲು ಮೋದಿಯವರು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರಿಗೆ ಎಲ್ಲಾ ಮಾಹಿತಿ ತಿಳಿದಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ನಂತರ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ರಾಜಕೀಯ ಮರೆತು ಜನರ ಅನುಕೂಲಕ್ಕಾಗಿ ಸರ್ಕಾರಗಳು ಶ್ರಮಿಸಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.