ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ @MumbaichaDon ಹ್ಯಾಂಡಲ್‌ನಡಿ ಕಾರ್ಯ ನಿರ್ವಹಿಸುತ್ತಿರುವ ಬಲಪಂಥೀಯ ಟ್ರೋಲ್ ನನ್ನು ಕರ್ನಾಟಕ ಪೋಲಿಸರು ಗೋವಾದಲ್ಲಿ ಬಂಧಿಸಿದ್ದಾರೆ.1988ರ ಕ್ರೈಂ ಥ್ರಿಲ್ಲರ್ ‘ಸತ್ಯಾ’ ಚಿತ್ರದಲ್ಲಿ ಮನೋಜ ಬಾಜಪೇಯಿ ನಿರ್ವಹಿಸಿದ್ದ ʼಭಿಕು ಮ್ಹಾತ್ರೆʼ ಪಾತ್ರದಿಂದ ಪ್ರೇರಿತನಾಗಿ ಅದೇ ಹೆಸರಿನಿಂದ ಪರಿಚಿತನಾಗಿರುವ ಆರೋಪಿ ಶನಿವಾರ ದಕ್ಷಿಣ ಗೋವಾದ ಪೊಂಡಾದಲ್ಲಿ ಕರ್ನಾಟಕ ಪೋಲಿಸರ ಬಲೆಗೆ ಬಿದ್ದಿದ್ದಾನೆ. ಈ ಬಗ್ಗೆ ಬೆಂಗಳೂರು ನಿವಾಸಿ ಜೆ.ಶರವಣನ್ ಪೋಲಿಸ್ ದೂರನ್ನು ದಾಖಲಿಸಿದ್ದರು.ಆರೋಪಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕುರಿತು ಮುಖ್ಯಮಂತ್ರಿಗಳ ಹೇಳಿಕೆಯ ಎಡಿಟ್ ಮಾಡಿದ್ದ ಕ್ಲಿಪ್‌ ಅನ್ನು ಆಕ್ಷೇಪಾರ್ಹ ಟೀಕೆಗಳೊಂದಿಗೆ ಪೋಸ್ಟ್ ಮಾಡಿದ್ದಾನೆ. ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟುಹಾಕಲು ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಗೆ ಮಸಿ ಬಳಿಯಲು ಆತ ಈ ಕೃತ್ಯವನ್ನು ಮಾಡಿದ್ದಾನೆ ಎಂದು ಶರವಣನ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಪೋಲಿಸರು ಆರೋಪಿಯ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.‘‘ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಮರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ ಮತ್ತು ಅದು ಎಸ್‌ಸಿ/ಎಸ್‌ಟಿಗಳನ್ನೂ ಒಳಗೊಂಡಿದೆ ಎಂದು ವಾದಿಸುತ್ತಿರುವರ ಮುಖಕ್ಕೆ ಇದನ್ನು ಎಸೆಯಿರಿ. ಕಾಂಗ್ರೆಸ್ ಎಸ್‌ಸಿ/ಎಸ್‌ಟಿಗಳು ಸೇರಿದಂತೆ ಹಿಂದುಗಳನ್ನು ದ್ವೇಷಿಸುತ್ತಿರುವುದರಿಂದ ಹಿಂದುಗಳಿಂದ ಸಂಪತ್ತನ್ನು ಕಿತ್ತುಕೊಂಡು ಮುಸ್ಲಿಮರಿಗೆ ‘ಮಾತ್ರ’ ಹಂಚಲು ಅದು ಬಯಸಿದೆ’’ ಎಂದು ಎ.22ರಂದು ಮಾಡಿದ್ದ ಟ್ವೀಟ್‌ನಲ್ಲಿ ಹೇಳಲಾಗಿತ್ತು. ನಂತರ ಈ ಟ್ವೀಟ್‌ನ್ನು ಅಳಿಸಲಾಗಿದೆ. ‘ಭಿಕು ಮ್ಹಾತ್ರೆ’ ತನ್ನ ಬಂಧನಕ್ಕೆ ಕೆಲವೇ ಗಂಟೆಗಳ ಮುನ್ನ ಎಕ್ಸ್‌ನ ಕಾನೂನು ತಂಡದಿಂದ ಇ-ಮೇಲ್‌ವೊಂದರ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದ. ಆತನ ಖಾತೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಮ್ಯಾಜಿಸ್ಟ್ರೇಟ್‌ರಿಂದ ಕೋರ್ಟ್ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿತ್ತು.ಪ್ರಚೋದನಕಾರಿ ಅಥವಾ ಕೋಮುವಾದಿ ಎಂದು ಪರಿಗಣಿಸಬಹುದಾದ ಏನನ್ನೂ ತಾನು ‘ಎಂದಿಗೂ’ ಪೋಸ್ಟ್ ಮಾಡಿಲ್ಲ ಎಂದು ಹೇಳಿಕೊಂಡಿದ್ದ ‘ಭಿಕು ಮ್ಹಾತ್ರೆ’,ಸತ್ಯವನ್ನು ಮಾತನಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ತನ್ನನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದ.@MumbaichaDon ಹ್ಯಾಂಡಲ್‌ನಡಿ ಕಾರ್ಯ ನಿರ್ವಹಿಸುತ್ತಿರುವ ಈತ ಬಿಜೆಪಿ ಮತ್ತು ಸಂಘಪರಿವಾರದ ಪರವಾಗಿ ಮತ್ತು ಮುಸ್ಲಿಮರ ವಿರುದ್ಧ ದ್ವೇಷಕಾರುವ ಪೋಸ್ಟ್‌ ಗಳನ್ನು ಮಾಡುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ದ್ವೇಷ ಹರಡುವ ಈತನನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಫಾಲೋ ಮಾಡುತ್ತಿದ್ದಾರೆ.ಈ ನಡುವೆ ‘ಭಿಕು ಮ್ಹಾತ್ರೆ’ಯನ್ನು ಬಂಧಿಸಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಬಂಧನವು ಅಧಿಕಾರದ ದುರುಪಯೋಗವಾಗಿದೆ ಎಂದು ಕಿಡಿಕಾರಿದೆ. ‘ಭಿಕು ಮ್ಹಾತ್ರೆ’ ಪರವಾಗಿ ಮಾತನಾಡಿರುವ ಹಲವಾರು ಬಿಜೆಪಿ ನಾಯಕರು, ಆತನಿಗೆ ಕಾನೂನು ಬೆಂಬಲವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.‘ಕರ್ನಾಟಕದ ಪೋಲಿಸರು ಗೋವಾದಿಂದ @MumbaichaDon ಅವರನ್ನು ಬಂಧಿಸಿದ್ದಾರೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೇವೆ ಮತ್ತು ಅವರಿಗೆ ಎಲ್ಲ ಕಾನೂನು ಬೆಂಬಲ ದೊರೆಯುವಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್ ಅರಾಜಕತೆಯನ್ನು ಹುಟ್ಟುಹಾಕಿದೆ, ಅದು ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ. ಆದರೆ ಈ ದೇಶದಲ್ಲಿ ಎಂದಿಗೂ ಇನ್ನೊಂದು ತುರ್ತು ಪರಿಸ್ಥಿತಿ ಇರುವುದಿಲ್ಲ’ ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.   