ಬೆಂಗಳೂರು, ಮೇ 17: ಹುಬ್ಬಳ್ಳಿಯ ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗಿರೀಶ್ ಸಾವಂತ್ ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ಬೆಂಗಳೂರಿನ ಸದಾಶಿವ ನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದಡಿ ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಮಹಿಳಾ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.  ನನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಅಂತ ಕೊಲೆಯಾದ ಅಂಜಲಿಯ ಅಜ್ಜಿ ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ, ಕೇವಲ ಮಾಹಿತಿ ನೀಡಿದ್ದರು. ಅಂಜಲಿ ಪೋಷಕರು ಪೊಲೀಸರಿಗೆ ಮೊದಲೆ ಮಾಹಿತಿ ನೀಡಿದ್ದೇವು ಅಂತ ಅಂದಿದ್ದಾರೆ. ಸದ್ಯ ಕೊಲೆ ಆರೋಪಿ ವಿಶ್ವನನ್ನು ಪೊಲೀಸರು ಬಂಧಿಸಿದ್ದಾರೆ, ಯಾವುದೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.  ಎಸ್ ಐಟಿ ವರದಿ ಮಂಡ್ಯ ಶಾಸಕರಿಗೆ ಸಿಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪರಮೇಶ್ವರ್ ಪ್ರತಿಕ್ರಿಯಿಸಿ, ಪ್ರಕರಣ ಇನ್ನೂ ತನಿಖೆ ಆಗುತ್ತಿದೆ. ಅನೇಕ ವಿಚಾರವನ್ನು ಸಾರ್ವಜನಿಕಗೊಳಿಸುವಂತಿಲ್ಲ. ಮಂಡ್ಯ ಶಾಸಕರಿಗೆ ಯಾರು ಮಾಹಿತಿ ನೀಡುತ್ತಾರೆ? ಆರೋಪ ಸುಲಭ, ಆದರೆ ನಾವು ಯಾವ ಮುಲಾಜಿಗೆ ಒಳಪಡಲ್ಲ. ಎಸ್ಟಿಐ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ತನಗೆ, ಮುಖ್ಯಮಂತ್ರಿಗೆ ಎಸ್ ಐಟಿ ಮಾಹಿತಿ ಕೊಡುತ್ತಾರೆ ಎಂದು ಹೇಳಿದರು.  