ಬೆಂಗಳೂರು : “ಪೆನ್ ಡ್ರೈವ್ ವಿಚಾರ ಎಲ್ಲರಿಗಿಂತ ಮುಂಚಿತವಾಗಿ ಗೊತ್ತಿದ್ದೇ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ. ಈ ಪ್ರಕರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಹಾಗೂ ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಬುಧವಾರ ಸದಾಶಿವನಗರ ನಿವಾಸದಲ್ಲಿ  ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.ಪೆನ್ ಡ್ರೈವ್ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಕೈವಾಡ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶಿವಕುಮಾರ್ ಅವರನ್ನು ಸ್ಮರಿಸದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ನಿದ್ದೆ ಬರುವುದಿಲ್ಲ. ನಾವು ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿದ್ದರೆ ಚುನಾವಣೆಗೆ ವಾರ ಅಥವಾ ಹತ್ತು ದಿನ ಮುಂಚಿತವಾಗಿಯೇ ಬಿಡುಗಡೆ ಮಾಡಬಹುದಾಗಿತ್ತಲ್ಲವೇ? " ಎಂದರು."ಇಲ್ಲಿ ಕುಮಾರಸ್ವಾಮಿ ಅವರ ಆರೋಪ ಮುಖ್ಯವೋ?, ಆ ಭಾಗದ ಐನೂರಕ್ಕಿಂತ ಹೆಚ್ಚು ಸಂತ್ರಸ್ತೆಯರ ರಕ್ಷಣೆ ನ್ಯಾಯ ಒದಗಿಸುವುದು ಮುಖ್ಯವೋ? ಅವರು ತಮ್ಮ ಹುಳುಕು ಮುಚ್ಚಿಕೊಳ್ಳಲು ದಿನಾ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ನಾವು ಚಿಂತನೆ ಮಾಡಬೇಕು. ಕುಮಾರಸ್ವಾಮಿ ಅವರು ಯಾವ ವಿಚಾರದಲ್ಲಿ ಶಿವಕುಮಾರ್ ಅವರ ವಿರುದ್ಧ ಟೀಕೆ ಮಾಡದೇ ಇದ್ದಾರೆ? ಎಲ್ಲಿ ಏನೇ ಆದರೂ ಅದಕ್ಕೆ ಶಿವಕುಮಾರ್ ಕಾರಣ ಎನ್ನುತ್ತಾರೆ. ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡದೇ ಇರಲು ಅವರಿಗೆ ಆಗುವುದಿಲ್ಲ” ಎಂದು ಹೇಳಿದರು.ನನ್ನ ಬಳಿ ಪೆನ್ ಡ್ರೈವ್ ಬರುವ ಮುನ್ನ ಡಿ.ಕೆ. ಶಿವಕುಮಾರ್ ಅವರ ಬಳಿ ಈ ಪೆನ್ ಡ್ರೈವ್ ಹೋಗಿತ್ತು ಎಂಬ ದೇವರಾಜೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಸನ ಜಿಲ್ಲೆಯಲ್ಲಿ ಕೇವಲ ಗುಸು ಗುಸು ಸುದ್ದಿ ಇತ್ತು. ಅವರು ಕೋರ್ಟ್ ನಲ್ಲಿ ತಡೆಯಾಜ್ಞೆ ಕೂಡ ತಂದಿದ್ದರು. ಪೆನ್ ಡ್ರೈವ್ ಹರಿದಾಡಿದ ನಂತರ ಈಗ ವಿಚಾರ ಚರ್ಚೆಯಾಗುತ್ತಿದೆ” ಎಂದರು.ಪ್ರಕರಣದಲ್ಲಿ ರೇವಣ್ಣ ಅವರನ್ನು ಎ1 ಮಾಡಿರುವುದಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕೇಳಿದಾಗ, “ದೂರಿನಲ್ಲಿ ಏನಿದೆ ಎಂಬ ಮಾಹಿತಿ ನನಗಿಲ್ಲ. ನಾನು ಮಾಧ್ಯಮಗಳ ಮೂಲಕ ವಿಚಾರ ತಿಳಿದಿದೆ. ಸಂತ್ರಸ್ತೆ ದೂರಿನ ಆಧಾರದ ಮೇಲೆ ಎ1 ಮಾಡಿರುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಬಣ್ಣವಿಲ್ಲ” ಎಂದರು.