Photo:instagram/harshikapoonachaofficialಬೆಂಗಳೂರು: ಭಾಷೆ ವಿಚಾರವಾಗಿ ನಿಂದಿಸಿ ಹಲ್ಲೆ ಯತ್ನ ಆರೋಪ ಸಂಬಂಧ ನಟ ಭುವನ್ ಹಾಗೂ ಅವರ ಪತ್ನಿ ನಟಿ ಹರ್ಷಿಕಾ ಪೂಣಚ್ಚ ಕಿಡಿಗೇಡಿಗಳ ವಿರುದ್ಧ ಶನಿವಾರ ನಗರದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರಿಗೆ ದೂರು ನೀಡಿದ್ದಾರೆ.ದೂರು ನೀಡಿದ ಬಳಿಕ ಮಾತನಾಡಿದ ನಟ ಭುವನ್, ನಗರ ಪೊಲೀಸ್ ಆಯುಕ್ತರು ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನು ಭೇಟಿಯಾಗಿದ್ದೇವೆ. ಎಫ್‍ಐಆರ್ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಘಟನೆ ನಡೆದಾಗ ದೂರು ಕೊಡುವುದರಿಂದ ಬೇರೆ ರೂಪ ಪಡೆದುಕೊಳ್ಳಲಿದೆ ಎಂಬ ಕಾರಣಕ್ಕಾಗಿ ದೂರು ಕೊಟ್ಟಿರಲಿಲ್ಲ. ಈ ಬಗ್ಗೆ ಸಂಬಂಧಿಕರು ಹಾಗೂ ಹಿತೈಷಿಗಳು ನೀಡಿದ ಸಲಹೆ ಹಿನ್ನೆಲೆಯಲ್ಲಿ ಎ.19ರ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಶನಿವಾರ ಪೊಲೀಸರಿಗೆ ದೂರು ಕೊಡಲಾಗಿದೆ ಎಂದರು.  ಬೆಂಗಳೂರಿನ ಪುಲಕೇಶಿನಗರದಲ್ಲಿರುವ ರೆಸ್ಟೋರೆಂಟ್‍ಗೆ ಹೋಗಿ ಊಟ ಮುಗಿಸಿಕೊಂಡು ಪಾರ್ಕಿಂಗ್ ನಲ್ಲಿ ಕಾರು ರಿವರ್ಸ್ ತೆಗೆದುಕೊಳ್ಳುವಾಗ ವ್ಯಕ್ತಿಯೋರ್ವ ಅನಾವಶ್ಯಕವಾಗಿ ಮಾತನಾಡಿ ಜಗಳ ತೆಗೆದಿದ್ದ. ಪ್ರತಿರೋಧ ತೋರಿದರೂ ವಾಕ್ಸಮರ ಮುಂದುವರೆಸಿದ್ದ ಎಂದು ನಟ ಭುವನ್ ಆರೋಪಿಸಿದ್ದಾರೆ.ಈ ಸಂಬಂಧ ನಟಿ ಹರ್ಷಿಕಾ ಪೂರ್ಣಚ್ಚ ಮಾತನಾಡಿ, ತಮಗಾಗಿರುವ ಕಹಿ ಅನುಭವನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಘಟನೆ ನಡೆದಾಗ ದೂರು ಕೊಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿತೈಷಿಗಳ ಸಲಹೆ ಮೇರೆಗೆ ದೂರು ನೀಡಿದ್ದೇನೆ. ದೂರಿನ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಅಲ್ಲದೆ, ದೂರನ್ನು ಯಾರೂ ನಮಗೆ ಬರೆದುಕೊಟ್ಟಿಲ್ಲ. ಇಲ್ಲಿ ಹುಟ್ಟಿಬೆಳೆದ ನಾನು ಕನ್ನಡ ಮಾತನಾಡಬಾರದೆ ಎಂದು ಅಸಮಾಧಾನದಲ್ಲಿ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ರೀತಿಯಲ್ಲಿ ನನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದೇ, ವಿನಃ ಬೆಂಗಳೂರು ಹಾಗೂ ಇಲ್ಲಿನ ಕಾನೂನು ಸುವ್ಯವಸ್ಥೆ ದೂಷಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.  ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ತನಿಖೆ ಆರಂಭಿಸಿ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.  