ಹುಬ್ಬಳ್ಳಿ: ದೇಶಾದ್ಯಂತ ಕಾಂಗ್ರೆಸ್ 50ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆದ್ದರೆ ಅವರನ್ನು ಸತ್ಕರಿಸುತ್ತೇನೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.ಸೋಮವಾರ ಧಾರವಾಡದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ 50ಕ್ಕಿಂತ ಹೆಚ್ಚು ಸ್ಥಾನ ಪಡೆಯುವುದಿಲ್ಲ ಎಂದು ಪುನರುಚ್ಚರಿಸಿದರು.  ಕಾಂಗ್ರೆಸ್ 65 ವರ್ಷದ ಆಡಳಿತದಲ್ಲಿ ಏನೇನು ಕೆಲಸ ಮಾಡಿದೆ? ಮೋದಿ ನೇತೃತ್ವದ ಬಿಜೆಪಿ ಸರಕಾರ ಹತ್ತೇ ವರ್ಷದಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಚುನಾವಣೆ ಸಮೀಪಿಸಿದಂತೆ ಸೋಲಿನ ಭಯದಲ್ಲಿ ಕಾಂಗ್ರೆಸ್ಸಿಗರು ರಾಜಕಾರಣಕ್ಕಾಗಿ ಏನೆಲ್ಲಾ ಆರೋಪ ಮಾಡುತ್ತಿದ್ದಾರೆ. ಆದರೆ, ಯಾರ ಅವಧಿಯಲ್ಲಿ ಏನು ಅಭಿವೃದ್ಧಿ ಆಗಿದೆ ಎಂಬುದನ್ನು ಮತದಾರರೂ ಅಷ್ಟೇ ಸೂಕ್ಶ್ಮವಾಗಿ ಗಮನಿಸಿದ್ದಾರೆ ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದರು.  ಅತಿಹೆಚ್ಚು ಲೀಡ್ ಪಡೆಯುವೆ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‍ವೈ ಸಹಕಾರದಿಂದ ಅತ್ಯಂತ ಹೆಚ್ಚಿನ ಲೀಡ್ ಪಡೆದೇ ಗೆಲುವು ಸಾಧಿಸುವೆ. ನಾಮಪತ್ರಿಕೆ ಸಲ್ಲಿಕೆ ವೇಳೆ ಮೆರವಣಿಗೆಗೆ ಕ್ಷೇತ್ರದ ಎಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಬಂದಿದ್ದಾರೆ. ಕಾರ್ಯಕರ್ತರು ತೋರುತ್ತಿರುವ ಈ ಉತ್ಸಾಹ, ಅತ್ಯಧಿಕ ಲೀಡ್‍ನಲ್ಲಿ ಗೆಲ್ಲುವ ನನ್ನ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ ಎಂದು ಜೋಶಿ ಹೇಳಿದರು.  