ಬೆಂಗಳೂರು : ತಾಯಂದಿರ ಎದೆಹಾಲು ಸಂಗ್ರಹಣೆ ಹಾಗೂ ಮಾರಾಟ ಚಟುವಟಿಕೆ ತಡೆಯುವಂತಹ ನಿರ್ದಿಷ್ಟ ಕಾನೂನುಗಳು ಜಾರಿಯಲ್ಲಿವೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಸಲ್ಲಿಸಿ ಎಂದು ಪ್ರಕರಣದ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿದೆ. ನಗರದ ಮರಳಕುಂಟೆಯ ಮುನೇಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಕೆಲವು ಬಹುರಾಷ್ಟ್ರೀಯ ಕಂಪನಿಗಳು ತಾಯಂದಿರ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿವೆ. ಇದರಿಂದ ವಾಣಿಜ್ಯ ಪ್ರಯೋಜನ ಪಡೆಯುತ್ತಿವೆ. ನೈತಿಕ ನಿಯಮಗಳಿಗೆ ವಿರುದ್ಧವಾದ ಇಂತಹ ಚಟುವಟಿಕೆಯನ್ನು ತಡೆಯಬೇಕು. ಈ ಸಂಬಂಧ ನಿರ್ದಿಷ್ಟ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತಾಯಂದಿರ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದಾದರೂ ನಿರ್ದಿಷ್ಟ ಘಟನೆ ನಡೆದಿರುವುದು ನಿಮಗೆ ಕಂಡುಬಂದಿದೆಯೇ? ಅಂತೆಯೇ ಇಂತಹ ಚಟುವಟಿಕೆಯನ್ನು ತಡೆಯಲು ದೇಶದ ಯಾವುದಾದರೂ ರಾಜ್ಯಗಳು ಅಥವಾ ವಿದೇಶಗಳಲ್ಲಿ ಸ್ಪಷ್ಟವಾದ ಕಾನೂನುಗಳು ಇವೆಯೇ? ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯೆ ಅರ್ಜಿದಾರರ ಪರ ವಕೀಲರು ನಾನು ಈತನಕ ನಡೆಸಿರುವ ಅಧ್ಯಯನದ ಪ್ರಕಾರ ಅಂತಹ ಯಾವುದೇ ಕಾನೂನು ಇಲ್ಲ ಎಂದರು.ಇದಕ್ಕೆ ನ್ಯಾಯಪೀಠ, ಇದೊಂದು ಪ್ರಮುಖವಾದ ವಿಚಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಅಧ್ಯಯನ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.