ಬೆಂಗಳೂರು : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ದಾರುಕೇಶ್ವರಯ್ಯ ಊಸರವಳ್ಳಿ ತರ ಬಣ್ಣ ಬದಲಾಯಿಸುವ ಮೂಲಕ ಬೇಡ ಜಂಗಮ ಜಾತಿಯ ಪ್ರಮಾಣ ಪತ್ರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಪರ ವಿಶೇಷ ವಕೀಲರು ಹೈಕೋರ್ಟ್ಗೆ ಗಂಭೀರ ಆರೋಪ ಮಾಡಿದ್ದಾರೆ.ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಪಡೆದಿರುವ ಎಂ.ಪಿ.ದಾರುಕೇಶ್ವರಯ್ಯ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿ ದಾಸರಹಳ್ಳಿಯ ಎಂ.ಚಂದ್ರ ಬಿನ್ ಮುನಿಯಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ವಿಶೇಷ ವಕೀಲ ಸಿ.ಜಗದೀಶ್, ದಾರುಕೇಶ್ವರಯ್ಯ ಈ ಮೊದಲು ಬೆಂಗಳೂರು ಉತ್ತರ ತಹಶೀಲ್ದಾರ್ ಅವರಿಂದ ಪಡೆದಿದ್ದ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದಾಗಿತ್ತು. ಈಗ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರಿಂದ ಇದೇ ರೀತಿಯ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಎರಡೆರಡು ಬಾರಿ ಇಂತಹ ಪ್ರಮಾಣ ಪತ್ರ ಪಡೆದು ಬಣ್ಣ ಬದಲಾಯಿಸುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರುಇದನ್ನು ಅಲ್ಲಗಳೆದ ದಾರುಕೇಶ್ವರಯ್ಯ ಪರ ವಕೀಲರು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು. ಅಲ್ಲಿಯವರೆವಿಗೂ ಈ ಮೊದಲು ನೀಡಿದ್ದ ಆದೇಶದ ಅನುಸಾರ ದಾರುಕೇಶ್ವರಯ್ಯ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಬಳಕೆ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ವಿಸ್ತರಿಸಿದೆ.