ಎಚ್.ಡಿ.ಕುಮಾರಸ್ವಾಮಿ/ಬಸರಾಜ ಬೊಮ್ಮಾಯಿ/ ತುಕರಾಂ/ ಕೋಟ ಶ್ರೀನಿವಾಸ್‌ ಪೂಜಾರಿಬೆಂಗಳೂರು : ಬೇಸಿಗೆ ಬಿಸಿಲಿನ ನಡುವೆಯೇ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಮೂವರು ಹಾಲಿ ಶಾಸಕರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರು ಕಣದಲ್ಲಿದ್ದು, ಇವರಲ್ಲಿ ಯಾರೇ ಗೆಲುವು ಸಾಧಿಸಿದರೂ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ.  ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಶಾಸಕಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರೆ, ಹಾವೇರಿ ಕ್ಷೇತ್ರದಿಂದ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಕಣದಲ್ಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಶಾಸಕ ಇ.ತುಕರಾಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಪರಿಷತ್ ಸದಸ್ಯ ಹಾಗೂ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಕಣದಲ್ಲಿದ್ದಾರೆ.‘ಲೋಕ’ ಅಖಾಡಕ್ಕಿಳಿದವರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು. ಮಂಡ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪ್ರತಿಸ್ಪರ್ಧಿಯಾಗಿದ್ದರೆ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್‍ನ ಕಾರ್ಯಕರ್ತ ಆನಂದಸ್ವಾಮಿ ಗಡ್ಡದೇವರ ಮಠ ತೀವ್ರ ಪೈಪೋಟಿ ನೀಡುತ್ತಿದ್ದಾರೆ.  ಇನ್ನೂ ಬಳ್ಳಾರಿ ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಇವರಿಗೆ ಶಾಸಕ ಈ.ತುಕರಾಂ ಪ್ರಬಲ ಪೈಫೋಟಿ ನೀಡುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಕಣದಲ್ಲಿದ್ದು, ಇಲ್ಲಿ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಎದುರಾಳಿಯಾಗಿದ್ದಾರೆ. ಇಬ್ಬರ ನಡುವೆಯೂ ತೀವ್ರ ಪೈಪೋಟಿ ಏರ್ಪಟ್ಟಿದೆ.   ಓರ್ವ ಪರಿಷತ್ ಸದಸ್ಯರು ಸೇರಿ ನಾಲ್ವರು ಹಾಲಿ ಶಾಸಕರು ಗೆಲುವು ಸಾಧಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರೆ, ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಆ ಬಳಿಕ ಆರು ತಿಂಗಳಲ್ಲಿ ಅವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಅನಿವಾರ್ಯವಾಗಿ ಉಪಚುನಾವಣೆ ನಡೆಸಬೇಕಾಗುತ್ತದೆ.  ಹಾಲಿ ಸಂಸದರಿಗೆ ಅಗ್ನಿಪರೀಕ್ಷೆ: ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ, ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರ್, ವಿಜಯಪುರದಿಂದ ರಮೇಶ್ ಜಿಗಜಿಣಗಿ, ಕಲಬುರಗಿಯಿಂದ ಉಮೇಶ್ ಜಾಧವ್, ರಾಯಚೂರಿನಿಂದ ರಾಜಾ ಅಮರೇಶ್ವರ್ ನಾಯಕ್, ಬೀದರ್ ನಿಂದ ಭಗವಂತ ಖೂಬಾ, ಧಾರವಾಡದಿಂದ ಪ್ರಹ್ಲಾದ್ ಜೋಶಿ, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಬೆಂ.ಕೇಂದ್ರದಿಂದ ಪಿ.ಸಿ.ಮೋಹನ್, ಬೆಂ.ದಕ್ಷಿಣದಿಂದ ತೇಜಸ್ವಿ ಸೂರ್ಯ ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದಾರೆ. ಅದೇ ರೀತಿಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಡಿ.ಕೆ.ಸುರೇಶ್, ಹಾನಸ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.  ಸಚಿವರ ಕುಟುಂಬದ ಸದಸ್ಯರ ಸ್ಪರ್ಧೆ: ಚಿಕ್ಕೋಡಿಯಲ್ಲಿ ಕಾಂಗ್ರೆಸ್‍ನ ಪ್ರಿಯಾಂಕಾ ಜಾರಕಿಹೊಳಿ, ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಬಾಗಲಕೋಟೆಯಲ್ಲಿ ಸಂಯುಕ್ತ ಪಾಟೀಲ್, ಬೀದರ್ ನಲ್ಲಿ ಸಾಗರ್ ಖಂಡ್ರೆ, ಚಾಮರಾಜನಗರ ಕ್ಷೇತ್ರದಲ್ಲಿ ಸುನೀಲ್ ಬೋಸ್, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯಾ ರೆಡ್ಡಿ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್, ಶಿವಮೊಗ್ಗದಿಂದ ಗೀತಾ ಶಿವರಾಜ್‍ಕುಮಾರ್ ಸ್ಪರ್ಧಿಸಿದ್ದು, ಇವರೆಲ್ಲರೂ ಆಡಳಿತಾರೂಢ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿರುವವರ ಕುಟುಂಬದ ಸದಸ್ಯರು ಎಂಬುದು ವಿಶೇಷ.  