Photo: x/@BGUdayBJPಬೆಂಗಳೂರು : ನಗರತ್ ಪೇಟೆಯ ಟೆಲಿಕಾಂ ಅಂಗಡಿಯೊಂದರಲ್ಲಿ ಲೌಡ್ ಸ್ಪೀಕರ್ ವಿಚಾರವಾಗಿ ಅಂಗಡಿ ಮಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌ ಸ್ಪಷ್ಟನೆ ನೀಡಿದ್ದು, ಇದು ಹನುಮಾನ್ ಚಾಲೀಸಾ ಅಥವಾ ಅಝಾನ್ ಪ್ರಾರ್ಥನೆಯ ವಿಷಯ ಸಂಬಂಧ ನಡೆದ ಗಲಾಟೆಯಲ್ಲ, ಇದು ಚುನಾವಣೆ ಸಮಯದಲ್ಲಿ ಆಗಿರುವುದರಿಂದ ಇದು ಇಷ್ಟು ದೊಡ್ಡ ವಿಷಯವಾಗಿದೆ ಎಂದು ಹೇಳಿದ್ದಾರೆ.ಈ ಕುರಿತು ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅವರು, ನಗರತ್ ಪೇಟೆ ಟೆಲಿಕಾಂ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಆ ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಇದು ನನ್ನ ಕ್ಷೇತ್ರವಾಗಿದ್ದರಿಂದ ನನಗೆ ಇದರ ಬಗ್ಗೆ ಮಾಹಿತಿ ಗೊತ್ತಿದೆ. ಇದನ್ನು ದೊಡ್ಡದಾಗಿಸುವ ಅವಶ್ಯತಕತೆ ಇರಲಿಲ್ಲ ಎಂದು  ಹೇಳಿದ್ದಾರೆ.ಚುನಾವಣೆ ಸಮಯ ಆದ್ದರಿಂದ ಘಟನೆ ಒಂದು ಉದ್ರೇಕಕಾರಿ ವಿಷಯವಾಗಿದೆ. ಅನ್ಯ ಕೋಮಿನ ಜನರು ಹಲ್ಲೆ ಮಾಡಿದ್ದಾರೆ ಎಂದು ನಾನು ಯಾವತ್ತೂ ಹೇಳಲ್ಲ, ನಾನು ಸೆಕ್ಯೂಲರ್‌ ವ್ಯಕ್ತಿ ಎಲ್ಲಾ ಜನಾಂಗದವರು ಚೆನ್ನಾಗಿ ಇರಬೇಕು ಎಂದು ಹೇಳುವವನು ನಾನು ಎಂದರು.ಬೆಳಿಗ್ಗೆ ತೇಜಸ್ವಿ ಸೂರ್ಯ ಫೋನ್‌ ಕಾಲ್ ಮಾಡಿದಾಗ ನಾನು ಅವರಿಗೆ, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದೇನೆ ಅದರಂತೆ ಈಗ ಅವರು ಹೇಳಿಕೆ ನೀಡಿದ್ದಾರೆ ಎಂದರು.ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್‌, "ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಬಿಜೆಪಿಯ ಪ್ರಾಪಗಾಂಡಾಗಳಿಗೆ ತಪರಾಕಿ ನೀಡಿದ್ದು, ಇದು ಬಿಜೆಪಿಯವರು ಚುನಾವಣೆಗಾಗಿ ಹಚ್ಚಿದ ಕೋಮು ಬೆಂಕಿ ಎನ್ನುವುದಕ್ಕೆ ಪುಷ್ಟಿ ನೀಡಿದ್ದಾರೆ" ಎಂದು ಹೇಳಿದೆ."ಸಂಸದ ತೇಜಸ್ವಿ ಸೂರ್ಯ ಎಂಬ ಎಂಬ ಅವಿವೇಕಿ ಶಿಶುವಿಗೆ ಈ ಗಲಾಟೆಯ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಬೇಡ ಎಂದು ಸ್ವತಃ ಬಿಜೆಪಿ ಶಾಸಕರೇ ಹೇಳಿದ್ದರೂ ಕೋಮು ಸಂಘರ್ಷ ಉಂಟುಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಕಣ್ಮರೆಯಾಗಿದ್ದ ತೇಜಸ್ವಿ ಸೂರ್ಯನಿಗೆ ತನ್ನ ಸಾಧನೆ ಹೇಳಿ ಮತ ಕೇಳುವ ಯೋಗ್ಯತೆ ಅರ್ಹತೆ ಇಲ್ಲದಿರುವುದೇ ಈ ಎಲ್ಲಾ ನಾಟಕಗಳ ಮೂಲ ಕಾರಣ" ಎಂದು ಕಟು ವಾಗ್ದಾಳಿ ನಡೆಸಿದೆ.ಬಿಜೆಪಿ ಪ್ರತಿಭಟನೆ: ಮಾಲಕ ಮುಖೇಶ್ ತನ್ನ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಭಜನೆ ಹಾಡುಗಳನ್ನು ಹಾಕಿದ್ದನ್ನು ಆಕ್ಷೇಪಿಸಿ ಅವರ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಪ್ರತಿಭಟನಾಕಾರರು ‘ಜೈ ಶ್ರೀರಾಮ್, ಜೈ ಹನುಮಾನ್’ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಹಿಂದೂಗಳ ವಿರುದ್ಧವಾಗಿದೆ ಎಂದು ಪ್ರತಿಭಟನೆಯಲ್ಲಿ ಖಂಡಿಸಲಾಯಿತು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಪೊಲೀಸರು ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಶಾಸಕ ಸುರೇಶ್‍ಕುಮಾರ್ ಸೇರಿದಂತೆ ಹಲವರು ನಾಯಕರು ಹಾಗೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದರು. 