ಬೆಂಗಳೂರು: ರಾಜ್ಯದಲ್ಲಿನ ಮತೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಇಂತಿಷ್ಟು(ಶೇ.25) ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರಬೇಕೆಂಬ ಷರತ್ತನ್ನು ರದ್ದುಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಅಲ್ಪಸಂಖ್ಯಾತರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳಲ್ಲಿ ವಿಭಿನ್ನ ರೀತಿಯ ಷರತ್ತುಗಳನ್ನು ವಿಧಿಸಿರುವುದರಿಂದ ಬಹಳಷ್ಟು ತೊಂದರೆ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಸರಕಾರಕ್ಕೆ ಪತ್ರ ಬರೆದಿದ್ದರು.ಈ ನಿಯಮ ಆದೇಶಗಳಲ್ಲಿ ನಮೂದಿಸಿರುವಷ್ಟು ಪ್ರಮಾಣದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಲಭ್ಯವಾಗಲು ಕಷ್ಟ. ಆದುದರಿಂದ, ಅಲ್ಪಸಂಖ್ಯಾತ ಸಂಸ್ಥೆಗಳನ್ನು ಘೋಷಿಸಲು ಇರುವ ನಿಯಮ, ಆದೇಶಗಳಲ್ಲಿ ಎರಡನೆ ಷರತ್ತನ್ನು(ಅಲ್ಪಸಂಖ್ಯಾತ ಸಮುದಾಯಕ್ಕೆ ಉಪಯೋಗ ಕಲ್ಪಿಸಲು ಸ್ಥಾಪಿಸಲಾಗಿರುವ ಶೈಕ್ಷಣಿಕ ಸಂಸ್ಥೆ)ಸಡಿಲಿಸುವ ಬಗ್ಗೆ ಪರಿಶೀಲಿಸುವಂತೆ ಅವರು ಕೋರಿದ್ದರು.ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಏಕರೂಪತೆಯ ಸರಕಾರದ ಆದೇಶ ಹೊರಡಿಸುವ ಬಗ್ಗೆ ಪರಿಶೀಲಿಸುವಂತೆಯೂ ಅವರು ಕೋರಿದ್ದರು.ಅದರಂತೆ, ಮಾ.12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಗಿತ್ತು. ಮಾ.16ರಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ಈ ಬಗ್ಗೆ ಸಂಬಂಧಪಟ್ಟ ನಿಯಮ, ಆದೇಶಗಳಿಗೆ ಸೂಕ್ತ ತಿದ್ದುಪಡಿ ಮಾಡಲು ಆಯಾ ಆಡಳಿತ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ.‘ಇದು ಸಂವಿಧಾನದ 30ನೇ ವಿಧಿಯ ಸ್ಪಷ್ಟ ದುರ್ಬಳಕೆಯಾಗಿದೆ. ತಮ್ಮ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸಲು ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಒದಗಿಸಲಾಗಿದೆ. ‘ಆಡಳಿತ' ಹಕ್ಕು ದುರಾಡಳಿತದ ಹಕ್ಕನ್ನು ಒಳಗೊಂಡಿಲ್ಲ. ಈ ಸಂಸ್ಥೆಗಳಲ್ಲಿ ಕನಿಷ್ಠ ಸೀಟುಗಳನ್ನು ಅವರ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೀಸಲಿಡುವ ನಿಬಂಧನೆಯನ್ನು ರದ್ದುಗೊಳಿಸುವುದು ಸಂವಿಧಾನದ 30ನೆ ವಿಧಿ ಅಡಿಯಲ್ಲಿ ಮೂಲಭೂತ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ದುರಾಡಳಿತವನ್ನು ನಿಯಂತ್ರಿಸಲು ರಾಜ್ಯವು ಮಧ್ಯಪ್ರವೇಶಿಸಬೇಕು. ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ.25ರಷ್ಟು ಸೀಟುಗಳನ್ನು ಮೀಸಲಿಡುವ ನಿಬಂಧನೆಯನ್ನು ತಕ್ಷಣವೇ ಮರುಸ್ಥಾಪಿಸಬೇಕು. ಅಗತ್ಯವಿದ್ದರೆ, ಮುಖ್ಯಮಂತ್ರಿ ಸಮುದಾಯದೊಳಗಿನ ಬಡ ಮತ್ತು ದುರ್ಬಲ ಮಕ್ಕಳ ಪರವಾಗಿ ಮಧ್ಯಸ್ಥಿಕೆ ವಹಿಸಬೇಕು’ಪ್ರೊ.ನಿರಂಜನಾರಾಧ್ಯ, ಶಿಕ್ಷಣ ತಜ್ಞ