ಬೆಂಗಳೂರು: ಮೊಬೈಲ್ ಅಂಗಡಿಯಲ್ಲಿ ಹಾಕಲಾಗಿದ್ದ ಸ್ಪೀಕರ್ ಶಬ್ದ  ಜಾಸ್ತಿಯಾಯಿತು ಎಂದು ಜಗಳವಾಡಿ ಅಂಗಡಿ ಮಾಲಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ ಬಿಜೆಪಿಯು ಪ್ರಕರಣಕ್ಕೆ ಕೋಮು ಬಣ್ಣ ನೀಡಲುಪ್ರಯತ್ನ ಪಟ್ಟಿದೆ.ಬೆಂಗಳೂರಿನ ಸಿದ್ದಣ್ಣ ಗಲ್ಲಿಯ ನಗರ್ತಪೇಟೆಯಲ್ಲಿ ರವಿವಾರ (ಮಾ.17) ಸಂಜೆ ಕೃಷ್ಣ ಟೆಲಿಕಾಂ ಅಂಗಡಿ ಮಾಲಕ ಮುಕೇಶ್ ಎಂಬಾತನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ದೂರುದಾರ ಮುಕೇಶ್ ನೀಡಿದ ದೂರಿನ ಮೇರೆಗೆ ಸುಲೇಮಾನ್, ಶಾನವಾಜ್, ರೋಹಿತ್, ದಾನಿಶ್, ತರುಣಾ ಅಲಿಯಾಸ್ ದಡಿಯ ಹಾಗೂ ಇತರರ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 506, 504, 149, 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡಿರುವ ಬಿಜೆಪಿ “ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಕರ್ನಾಟಕ ತಾಲಿಬಾನ್ ಆಗುತ್ತಿದೆ, ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಹಿಂದೂ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ. ಹಲ್ಲೆಗೊಳಗಾದ ಮುಖೇಶ್ ಹಲಸೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಪಾ'ಕೈ'ಸ್ತಾನ್ ಸರ್ಕಾರ ಮತಾಂಧ ಗೂಂಡಾ ಬ್ರದರ್ಸ್ಗಳನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಆರೋಪಿಸಿದೆ.ಘಟನೆ ಮಾ. 17 ರ ಸಂಜೆ 6:30 ರ ಸುಮಾರಿಗೆ ನಡೆದಿದ್ದು, ಅದೇ ದಿನ 22:30 ಕ್ಕೆ (ಅಂದರೆ ರಾತ್ರಿ 10:30) ದೂರು ಸ್ವೀಕರಿಸಿ, ಮರು ದಿನ ಬೆಳಿಗ್ಗೆ (ಮಾ. 18 ರ 10:30 ) ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಎಫ್ಐಆರ್ ವರದಿಯಲ್ಲಿ ದಾಖಲಾಗಿದೆ. ಆದರೆ, ಮಾ. 18 ರ 11:20 ಕ್ಕೆ ಬಿಜೆಪಿಯು, ʼಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆʼ ಎಂದು ಟ್ವೀಟ್ ಮಾಡಿದೆ. ಆದರೆ, ಬಿಜೆಪಿ ಟ್ವೀಟ್ ಮಾಡುವ ಹೊತ್ತಿಗಾಗಲೇ ಎಫ್ಐಆರ್ ದಾಖಲಿಸಿ, ನ್ಯಾಯಾಲಯಕ್ಕೂ ರವಾನಿಸಲಾಗಿತ್ತು. ದೂರುದಾರ ನೀಡಿದ ದೂರಿನಲ್ಲಿಯೂ ಆಝಾನ್, ಹನುಮಾನ್ ಚಾಲಿಸಾದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಆದರೆ, ಲೋಕಸಭಾ ಚುನಾವಣಾ ಹೊತ್ತಿನಲ್ಲಿ ಅಶಾಂತಿ ಹಬ್ಬಿಸಲು ಬಿಜೆಪಿ ಘಟನೆಗೆ ಕೋಮು ಬಣ್ಣ ನೀಡಿ ತಿರುಚುತ್ತಿದೆ ಎಂದು ಆರೋಪಿಸಲಾಗಿದೆ.  ವಿಡಿಯೋದಲ್ಲಿ ಏನಿದೆ?ಮುಕೇಶ್ ಮೇಲೆ ಗುಂಪು ಹಲ್ಲೆ ನಡೆಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮುಕೇಶ್ ಅಂಗಡಿಗೆ ಬಂದ ಯುವಕರ ಗುಂಪೊಂದು ವಾಗ್ವಾದದಲ್ಲಿ ತೊಡಗುವುದು ಕಂಡು ಬರುತ್ತದೆ. ಒಂದು ಹಂತದಲ್ಲಿ ಮುಕೇಶ್ ಹಾಗೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಗುಂಪಿನಲ್ಲಿದ್ದ ಯುವಕನೊಬ್ಬ ಮುಕೇಶ್ ಗೆ ಹಲ್ಲೆ ನಡೆಸುತ್ತಾನೆ. ನಂತರ ಹಲ್ಲೆಕೋರನಿಗೆ ಮತ್ತೋರ್ವ ಯುವಕನೂ ಸೇರಿ ಮುಕೇಶ್ ಮೇಲೆ ಹಲ್ಲೆ ನಡೆಸುವುದು ಕಂಡು ಬರುತ್ತದೆ. ಈ ವೇಳೆ ಅಂಗಡಿಯಿಂದ ಹೊರ ಬರುವ ಮುಕೇಶ್ ಯುವಕರ ಮೇಲೆ ಪ್ರತಿ ಹಲ್ಲೆ ನಡೆಸುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮುಖೇಶ್ ತನ್ನ ದೂರಿನಲ್ಲಿ ಹೇಳಿದ್ದೇನು?ಬೆಂಗಳೂರು ನಗರ ಜುಮಾ ಮಸೀದಿ ರಸ್ತೆ ಸಿದ್ದಣ್ಣ ಗಲ್ಲಿಯಲ್ಲಿ ಟೆಲಿಕಾಂ ಅಂಗಡಿಯನ್ನು ಇಟ್ಟುಕೊಂಡು ನಾನು ಜೀವನ ಮಾಡುತ್ತಿದ್ದೇನೆ. 17-3-24 ರಂದು ಸಂಜೆ 6-25 ಕ್ಕೆ ನಾನು ಅಂಗಡಿಯಲ್ಲಿ ಇರುವಾಗ ಸುಲೇಮಾನ್, ಶನವಾಝ್, ರೋಹಿತ್, ದಾನಿಶ್, ತರುಣ್ ಹಾಗೂ ಮತ್ತೊಬ್ಬರು ನನ್ನ ಅಂಗಡಿಗೆ ಬಂದು ಏಕೆ ಲೌಡ್ ಸ್ಪೀಕರ್ ಜೋರಾಗಿ ಹಾಕಿರುವೆ ? ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ನನ್ನ ಮುಖಕ್ಕೆ ಗುದ್ದಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಮುಕೇಶ್ ಅವರು ತನ್ನ ದೂರಿನಲ್ಲಿ ಉಲೇಖಿಸಿದ್ದಾರೆ. ಗುಬ್ಬಿ ಪ್ರಕರಣದಲ್ಲೂ ಅಶಾಂತಿ ಸೃಷ್ಟಿಸಲು ಬಿಜೆಪಿ ಯತ್ನಇತ್ತೀಚೆಗೆ ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ರಥಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೂ ಕೋಮು ಆಯಾಮ ನೀಡಲು ಬಿಜೆಪಿ ಪ್ರಯತ್ನ ಮಾಡಿತ್ತು. ಉತ್ತರ ಪ್ರದೇಶದ ಗೋರಕ್ಪುರದ ಉದಾರಿ ಬಿನ್ ರಾಧೇಶಾಂ ಎಂಬಾತನ್ನು ರಥಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು.ಕಾಂಗ್ರೆಸ್ ಸರ್ಕಾರದ ವಿರುದ್ಧ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದ ಬಿಜೆಪಿ, “ರಾಜ್ಯದಲ್ಲಿ ಕಾಂಗ್ರೆಸ್ (INCKarnataka) ಸರ್ಕಾರ ಅಧಿಕಾರಕ್ಕೆ ಹಿಂದೂ ಧರ್ಮೀಯರ ಮೇಲೆ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಿತ್ಯ ನಿರಂತರ. ಮತಾಂಧ ಖಿಲ್ಜಿ, ಘಜ್ನಿ, ಘೋರಿ ಕಾಲದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದ ಮಾದರಿಯಲ್ಲಿ ತುಮಕೂರಿನ ಗುಬ್ಬಿಯ ನಿಟ್ಟೂರುಪುರದ 800 ವರ್ಷಗಳ ಇತಿಹಾಸ ಹೊಂದಿರುವ ಕಲ್ಲೇಶ್ವರ ಸ್ವಾಮಿಯ ರಥಕ್ಕೆ ಮಟ ಮಟ ಮಧ್ಯಾಹ್ನವೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸಿಎಂ ಸಿದ್ದರಾಮಯ್ಯ  ಅವರೇ, ಇದು ನಿಮ್ಮ ಓಲೈಕೆ ಹಾಗೂ ಅರಾಜಕತೆಯ ಆಡಳಿತದ ದುಷ್ಪರಿಣಾಮ. ಹಿಂದೂ ಧರ್ಮ, ಹಿಂದೂ ದೇವಾಲಯ, ಹಿಂದೂಗಳ ಮೇಲಿನ ನಿಮಗೇಕೆ ಈ ಪರಿ ಅಸಡ್ಡೆ . ಹಿಂದೂಗಳಿಗೆ ನಿಮ್ಮ ಆಡಳಿತದಲ್ಲಿ ರಕ್ಷಣೆ ಇಲ್ಲವೇ..?” ಎಂದು ಬರೆದಿತ್ತು.ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಹಿಂದೂ ಧರ್ಮೀಯರ ಮೇಲೆ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಿತ್ಯ ನಿರಂತರ.ಮತಾಂಧ ಖಿಲ್ಜಿ, ಘಜ್ನಿ, ಘೋರಿ ಕಾಲದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದ ಮಾದರಿಯಲ್ಲಿ ತುಮಕೂರಿನ ಗುಬ್ಬಿಯ ನಿಟ್ಟೂರುಪುರದ 800 ವರ್ಷಗಳ ಇತಿಹಾಸ ಹೊಂದಿರುವ ಕಲ್ಲೇಶ್ವರ ಸ್ವಾಮಿಯ ರಥಕ್ಕೆ ಮಟ ಮಟ… pic.twitter.com/EyG9fFmJeT ನಿಮ್ಮ ನೆಚ್ಚಿನ ವಾರ್ತಾಭಾರತಿ ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯhttps://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.