ಸಾಂದರ್ಭಿಕ ಚಿತ್ರಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಜ್ ಮುನೀರ್ ಎಂಬಾತನನ್ನು ಎನ್‍ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.ಆರೋಪಿ ಮಾಜ್ ಮುನೀರ್(21) ಶಿವಮೊಗ್ಗದ ತೀರ್ಥಹಳ್ಳಿ ಮೂಲದವನಾಗಿದ್ದು, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತನಾಗಿದ್ದ. ಇದೀಗ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಎನ್‍ಐಎ ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಬಳ್ಳಾರಿ ಮಾಡ್ಯೂಲ್ ಗೂ ಸಾಮ್ಯತೆ ಇರುವುದು ಎನ್‍ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು ಎಂದು ತಿಳಿದುಬಂದಿದೆ.ಇದಕ್ಕೂ ಮುನ್ನ, 2023ರ ಡಿ.17ರಂದು ಬಳ್ಳಾರಿ ಮಾಡ್ಯೂಲ್ (ಬಳ್ಳಾರಿಯನ್ನು ಕೇಂದ್ರವನ್ನಾಗಿಸಿಕೊಂಡು ಕೃತ್ಯ) ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಳ್ಳಾರಿ ಮೂಲದ ಮಿನಾಜ್ ಯಾನೆ ಎಂ.ಡಿ ಸುಲೇಮಾನ್, ಸೈಯದ್ ಸಮೀರ್ ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿ ಅನಾಸ್ ಇಕ್ಬಾಲ್ ಶೇಕ್, ಹೊಸದಿಲ್ಲಿಯಲ್ಲಿ ಶಯಾನ್ ರೆಹಮಾನ್ ಯಾನೆ ಹುಸೇನ್‍ನನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.ಮತ್ತೊಂದೆಡೆ ಕೆಫೆಯಲ್ಲಿ ಸ್ಫೋಟ ಸಂಭವಿಸಿ 16 ದಿನ ಕಳೆದರೂ ಈವರೆಗೆ ಆರೋಪಿಯ ಸುಳಿವು ಪತ್ತೆಯಾಗುತ್ತಿಲ್ಲ. ಪ್ರಕರಣದ ತನಿಖೆ ಆರಂಭಿಸಿರುವ ಎನ್‍ಐಎ ಅಧಿಕಾರಿಗಳು, ಶಂಕಿತನ ಕೆಲ ಫೋಟೋಗಳನ್ನು ಬಿಡುಗಡೆಗೊಳಿಸಿ, ಆರೋಪಿಯನ್ನು ಯಾರಾದರೂ ನೋಡಿದ್ದಲ್ಲಿ ಅಥವಾ ಆತನ ಬಗ್ಗೆ ಸುಳಿವಿದ್ದಲ್ಲಿ ದೂ.ಸಂ.080-2951 0900, 89042 41100ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. 