ಬೆಂಗಳೂರು: ಕರ್ನಾಟಕ ಗೃಹಮಂಡಳಿ ವತಿಯಿಂದ ಬೆಂಗಳೂರು ಹೊರವಲಯದಲ್ಲಿ 500 ಎಕರೆ ಪ್ರದೇಶದಲ್ಲಿ ನೂತನ ಬಡಾವಣೆ (ಮಿನಿ ಟೌನ್ ಶಿಪ್ ) ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಹಾಗೂ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಏಳು ಗ್ರಾಮಗಳ 500 ಎಕರೆ ಪ್ರದೇಶದಲ್ಲಿ 50:50 ಅನುಪಾತದಲ್ಲಿ ಬಡಾವಣೆ ನಿರ್ಮಾಣ ವಾಗಲಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.1066.50ಕೋಟಿ ರೂ. ಮೊತ್ತದ ಯೋಜನೆಗೆ ರೈತರು ಜಮೀನು ನೀಡಲು ರೈತರು ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಯೋಜನೆ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಯಿಂದ 5.5 ಕಿ. ಮೀ. ವ್ಯಾಪ್ತಿಯಲ್ಲಿ ಬರಲಿದೆ. ರೈತರ ಜತೆ ಪಾಲುದಾರಿಕೆಯಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.ಈ ಹಿಂದೆ ಕೆಂಗೇರಿ ಹೋಬಳಿ ಹಾಗೂ ಬಿಡದಿ ಹೋಬಳಿಯಲ್ಲಿ ನಿವೇಶನ ಬೇಡಿಕೆ ಸಮೀಕ್ಷೆ ಮಾಡಿದ್ದು, 2666 ಅರ್ಜಿಗಳು ಬಂದಿದ್ದು, ಈ ಹಿಂದೆ ನಿವೇಶನ ಬಯಸಿ ಸಲ್ಲಿಸಿರುವ  3881 ಅರ್ಜಿಗಳು ಕೂಡಾ ಹಂಚಿಕೆಗೆ ಬಾಕಿ ಇದ್ದು ಪ್ರಸ್ತಾಪಿತ ಯೋಜನೆಗೆ ಪರಿಗಣಿಸಲಾಗುವುದು ಎಂದು ವಿವರಿಸಿದ್ದಾರೆ.