ಸಾಂದರ್ಭಿಕ ಚಿತ್ರಬೆಂಗಳೂರು : ನಗರದ ಖಾಸಗಿ ಕಾಲೇಜಿನ ಮಹಿಳಾ ಶೌಚಾಲಯ ಕೊಠಡಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧ ವಿದ್ಯಾರ್ಥಿಯೊಬ್ಬನನ್ನು ಇಲ್ಲಿನ ಕುಂಬಳಗೂಡು ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.  ನಗರದ ಮೈಸೂರು ರಸ್ತೆಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಅದೇ ಕಾಲೇಜಿನ ಕುಶಾಲ್ ಎಂಬ ವಿದ್ಯಾರ್ಥಿ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ವಿದ್ಯಾರ್ಥಿನಿಯೊಬ್ಬರು ಗಮನಿಸಿ ಗಾಬರಿಯಿಂದ ಹೊರಗೆ ಓಡಿ ಬಂದು ಇತರರಿಗೆ ವಿಷಯ ತಿಳಿಸಿದ್ದಾಳೆ. ಈ ವೇಳೆ ಕ್ಯಾಮೆರಾ ಇಟ್ಟ ಕುಶಾಲ್‍ನನ್ನು ಇತರ ವಿದ್ಯಾರ್ಥಿಗಳು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.  ಘಟನೆಯನ್ನು ಖಂಡಿಸಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಪರಿಣಾಮ ತೀವ್ರವಾಗುತ್ತಿದ್ದಂತೆ ಕುಂಬಳಗೂಡು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಕುಶಾಲ್‍ನನ್ನು ಬಂಧಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.   ಆರೋಪಿ ಕುಶಾಲ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದ್ದು, ಈತನ ಬಳಿ ಒಟ್ಟು ಸುಮಾರು 8ಕ್ಕೂ ಅಧಿಕ ಖಾಸಗಿ ವಿಡಿಯೋ ಕ್ಲಿಪ್‍ಗಳಿವೆ ಎಂದು ಹೇಳಲಾಗುತ್ತಿದೆ. ಕೆಲ ತಿಂಗಳಿಂದ ವೀಡಿಯೋ ರೆಕಾರ್ಡ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.  