ಬೆಂಗಳೂರು: ಮನೆ ಬಾಗಿಲಿಗೆ ನೇತ್ರ ತಪಾಸಣೆ ಸೇವೆ ತಲುಪಿಸುವ 'ಆಶಾಕಿರಣ' ಯೋಜನೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರಿಗೆ ಉಚಿತ ಕನ್ನಡಕವನ್ನು ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.  ಬುಧವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಅವರ ಮನೆ ಬಾಗಿಲಿಗೆ ನೇತ್ರ ಅರೋಗ್ಯ ತಪಾಸಣೆ ಮತ್ತು ಆರೈಕೆಯನ್ನು ತಲುಪಿಸುವ ಉದ್ದೇಶದಿಂದ ಈ ಆಶಾಕಿರಣ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ ಎಂದರು.  ಈ ಪ್ರಯತ್ನವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಆರೋಗ್ಯ ಇಲಾಖೆಯು ಹೊಸ ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಗ್ರ ಕಣ್ಣಿನ ಆರೈಕೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಸಿ-ಕ್ಯಾಂಪ್ ಮತ್ತು ಆಕ್ಟ್ ಫಾರ್ ಹೆಲ್ತ್ ನೊಂದಿಗೆ ಇಲಾಖೆ ಜತೆಯಾಗಿದೆ. ಈ ಯೋಜನೆಯನ್ನು ರಾಜ್ಯ ಸಾರಿಗೆ ಇಲಾಖೆಯ ಎಲ್ಲ ಸಿಬ್ಬಂದಿಗೂ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.  ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಬಸ್ ಡಿಪೋಗಳಲ್ಲಿ ಕಣ್ಣಿನ ವಕ್ರೀಕಾರಕ ದೋಷಗಳು ಮತ್ತು ರೆಟಿನೋಪತಿಗಳಂತಹ ಸಮಸ್ಯೆಗಳಿಗೆ ಸುಧಾರಿತ ನೇತ್ರ ತಪಾಸಣೆ ನಡೆಸಲು ಸಜ್ಜುಗೊ ಳಿಸಲಾಗುತ್ತಿದೆ. ಈ ಉಚಿತ ತಪಾಸಣೆಗಳ ಜೊತೆಗೆ, ಸಾರ್ವಜನಿಕರಿಗೆ ಉಚಿತ ಕನ್ನಡಕಗಳನ್ನೂ ಸಹ ವಿತರಿಸಗಾಗುವುದು ಎಂದು ವಿವರಿಸಿದರು.  ರಾಜ್ಯದಲ್ಲಿ ಅಂಧತ್ವವನ್ನು ಪೂರ್ಣತಃ ನಿರ್ಮೂಲನೆ ಮಾಡುವ ಉದ್ದೇಶದಿಂದ, ಈಗಾಗಲೇ 1 ಕೋಟಿಗೂ ಹೆಚ್ಚು ವ್ಯಕ್ತಿಗಳು ಕಣ್ಣಿನ ತಪಾಸಣೆಗೆ ಒಳಗಾಗಿದ್ದಾರೆ, 39,000 ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. 2.45 ಲಕ್ಷ ಜನರು ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಕನ್ನಡಕದಿಂದ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.  ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಸಚಿವ ರಾಮಲಿಂಗ ರೆಡ್ಡಿ ಅವರ ಕಣ್ಣನ್ನು ಪರೀಕ್ಷಿಸಿದ ಪ್ರಸಂಗ ಜರುಗಿತು. ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಿ-ಕ್ಯಾಂಪ್ ನಿರ್ದೇಶಕ ಡಾ.ತಸ್ಲೀಮಾರೀಫ್ ಸೆಯ್ಯದ್, ಆಕ್ಟ್ ಸಂಸ್ಥೆಯ ಸದಸ್ಯ ಸಂದೀಪ್ ಸಿಂಘಲ್, ಕ್ರಿಶಾ ಮಾಥುರ್ ಸೇರಿದಂತೆ ಪ್ರಮುಖರಿದ್ದರು.  