ಸಾಂದರ್ಭಿಕ ಚಿತ್ರ Photo: PTIಬೆಂಗಳೂರು: ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ, ರಾಜ್ಯ ಸರಕಾರಿ ನೌಕರರಿಗೆ 2024ರ ಜನವರಿ 1ರಿಂದಲೆ ಪೂರ್ವಾನ್ವಯವಾಗುವಂತೆ ಶೇ.3.75ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸುವ ಮೂಲಕ ಸಿಹಿ ಸುದ್ದಿಯನ್ನು ನೀಡಿದೆ.ಮಂಗಳವಾರ ಈ ಸಂಬಂಧ ಆರ್ಥಿಕ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಉಮಾ ಕೆ. ಅವರು ಆದೇಶ ಹೊರಡಿಸಿದ್ದು, ಕೇಂದ್ರ ವೇತನ ನೀತಿಯಂತೆ ವೇತನ ಪಡೆಯುವ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಏರಿಸಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 1,792 ಕೋಟಿ ರೂ.ಗಳಷ್ಟು ಹೊರೆಯಾಗಿದೆ ಎಂದು ಹೇಳಲಾಗಿದೆ.  ರಾಜ್ಯ ಸರಕಾರಿ ನೌಕರರಿಗೆ ಶೇ.38.75ರಷ್ಟು ತುಟ್ಟಿಭತ್ಯೆ ಇತ್ತು. ಅದನ್ನು ಇದೀಗ ಶೇ.42.5ಕ್ಕೆ ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ. ಕೆಲದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯ ಸರಕಾರದ ಮುಂದೆ ಶೇ.4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಬೇಕೆಂದು ಕೋರಿ ಮನವಿ ಸಲ್ಲಿಸಿತ್ತು.  ಸರಕಾರಿ ನೌಕರರು, ಯುಜಿಸಿ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೂ ಈ ಆದೇಶ ಅನ್ವಯವಾಗಲಿದೆ. ಅಲ್ಲದೆ, ಸರಕಾರ ಮತ್ತು ಜಿ.ಪಂ.ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ ಚಾರ್ಜ್ ನೌಕರರಿಗೆ ಹಾಗೂ ಸರಕಾರದಿಂದ ಸಹಾಯಾನುಧಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿವಿಗಳಲ್ಲಿ ಕಾರ್ಯನಿರ್ವಹಿಸುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  