ಬೆಂಗಳೂರು ಮಾರ್ಚ್ 11: ಸರ್ವಾಧಿಕಾರ ಧೋರಣೆಯ ಮೇಲೆ ನಂಬಿಕೆಯಿರಿಸಿರುವ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಒಳಸಂಚನ್ನು ಮಾಡಿದ್ದಾರೆ. ನರೇಂದ್ರ ಮೋದಿಯವರು ತಮ್ಮ ಈ ಯೋಚನೆಯನ್ನು ಅನಂತಕುಮಾರ್ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದ ಅನಂತಕುಮಾರ್ ಹೆಗಡೆಯವರು ಸಂವಿಧಾನದ ಬಗ್ಗೆ ಅನಗತ್ಯವಾಗಿ ಮಾತಾನಾಡಿದ್ದಾರೆ. ಈ ಮುಂಚೆ ಕೇಂದ್ರ ಸಚಿವರಾಗಿದ್ದಾಗಲೂ ಈ ಮಾತನ್ನು ಹೇಳಿದ್ದರು. ಇದು ಬಿಜೆಪಿಯ  ಒಳಸಂಚಾಗಿದೆ. ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರಬೇಕಾದರೆ ಸರ್ಕಾರಕ್ಕೆ ಮೂರಕ್ಕೆ ಎರಡರಷ್ಟು ಬಹುಮತವಿರಬೇಕು ಎಂದರು.ಬಿಜೆಪಿಯವರಿಗೆ ದೇಶ ಹಾಗೂ ಬಡವರ ಏಳಿಗೆಗೆ ಬಹುಮತ ಬೇಕಾಗಿಲ್ಲ. ಬದಲಾಗಿ ಸಂವಿಧಾನ ಬದಲಾಯಿಸಲು ಬಹುಮತ ಬೇಕಾಗಿದೆ. ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನವಿರಬೇಕೆಂಬುದು ಬಿಜೆಪಿಯ ಒಳಸಂಚು. ಆದ್ದರಿಂದ ಇಡೀ ದೇಶದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಯ ಈ ಯೋಚನೆಯನ್ನು ವಿರೋಧಿಸಬೇಕು. ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ, ಈ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದರು.ಸಂವಿಧಾನ ಬದಲಾವಣೆ ಇಂಗಿತ; ವೈಯಕ್ತಿಕ ಹೇಳಿಕೆ ಅಲ್ಲಅನಂತಕುಮಾರ್ ರವರ ಹೇಳಿಕೆ ವೈಯಕ್ತಿಕ ಎಂದು ಬಿಜೆಪಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಮಂತ್ರಿಮಂಡಲದಲ್ಲಿದ್ದಂತಹವರು ಹಾಗೂ ಹಾಲಿ ಸಂಸದರಾಗಿರುವ  ಹಿರಿಯ ನಾಯಕರಾದ ಅನಂತಕುಮಾರ್ ರವರ  ಹೇಳಿಕೆ ವೈಯಕ್ತಿಕವಾಗುತ್ತದೆಯೇ? ಅವರಿಗೆ  ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದೇ ಮನುಸ್ಮೃತಿಯ ತತ್ವಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ. ಆದರೆ ನಮ್ಮ ಸಂವಿಧಾನ ಸಮಸಮಾಜ ನಿರ್ಮಾಣದ ತತ್ವವನ್ನು ಹೊಂದಿದ್ದು, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳು  ಪ್ರಮುಖ ಪಾತ್ರ ವಹಿಸುತ್ತವೆ ಎಂದರು. 