ಬೆಂಗಳೂರು: ಸ್ವಾತಂತ್ರ್ಯ ಚಳುವಳಿಯಲ್ಲಿಯೇ ಭಾಗವಹಿಸದ ಹಿಂದೂ ಮಹಾಸಭಾ ಹೆಸರಿನಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) 1947ರ ವರೆಗೆ ಬ್ರಿಟಿಷರಿಗೆ ಗುಲಾಮವಾಗಿತ್ತು. ಈಗ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಟ್ಟಿದೆ ಎಂದು ಹೈಕೋರ್ಟ್‍ನ ಹಿರಿಯ ವಕೀಲ ಎಸ್. ಬಾಲನ್ ತಿಳಿಸಿದ್ದಾರೆ.ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ಲಡಾಯಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪತ್ರಕರ್ತ ನವೀನ್ ಸೂರಿಂಜೆ ರಚಿಸಿರುವ ‘ಮಹೇಂದ್ರ ಕುಮಾರ್- ನಡುಬಗ್ಗಿಸದ ಎದೆಯ ದನಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಬಾಲಿವುಡ್‍ನಲ್ಲಿ ಶೇ.83ರಷ್ಟು ಬ್ರಾಹ್ಮಣರೇ, ಮೀಡಿಯಾ ಆಂಕರ್ಸ್ ಶೇ.93 ಬ್ರಾಹ್ಮಣರೇ, ಐಎಎಸ್ ಶೇ.71, ಐಪಿಎಸ್ ಶೇ.61ರಷ್ಟು ಬ್ರಾಹ್ಮಣರೇ ಇದ್ದಾರೆ. ವಿದೇಶಿ ರಾಯಭಾರಿಗಳು ಹೆಚ್ಚಿನ ಮಂದಿ ಬ್ರಾಹ್ಮಣರಾಗಿದ್ದಾರೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಬ್ರಾಹ್ಮಣರ ಕೈಯಲ್ಲಿದೆ. ಈಗ ದೇಶದ ಸಂಪತ್ತು ಅದಾನಿ, ಅಂಬಾನಿ, ಬನಿಯಾಗಳ ಕೈಗೆ ಹೋಗಿದೆ. ಶೂದ್ರರಿಗೆ, ದಲಿತರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಟ್ಟಿದ್ದಾರೆ ಎಂದು ಅವರು ಟೀಕಿಸಿದರು.  ದಲಿತರು, ಶೂದ್ರರಿಗೆ ಏನು ತಿನ್ನಬೇಕು, ಎಲ್ಲಿ ಮಲಗಬೇಕು ಎಂದು ತಿಳಿದಿಲ್ಲ. ವಾಶ್ ರೂಂ ಇದೆಯೇ ಎನ್ನುವುದೂ ಗೊತ್ತಿಲ್ಲ. ದಲಿತ, ಶೂದ್ರರನ್ನು ಇಂತಹ ಪರಿಸ್ಥಿತಿಯಲ್ಲಿಟ್ಟು, ಅಧಿಕಾರ ಸಂಪತ್ತು ಐಶಾರಾಮಿ ಜೀವನ ಎಲ್ಲವನ್ನು ಬ್ರಾಹ್ಮಣರೇ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.  ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಕೋಮುವಾದಿಗಳನ್ನು ಹೆದರಿಸಲು ನಮ್ಮದೇ ಆದಂತಹ ನಾಯಕತ್ವ ಬೇಕಾಗಿದೆ. ಸಾವಿರಾರು ಜನ ಮಹೇಂದ್ರ ಕುಮಾರ್ ಹುಟ್ಟಿಕೊಂಡರೂ, ಈಗಿನ ಪರಿಸ್ಥಿತಿ ಎದುರಿಸುವುದು ಕಷ್ಟ. ಎಲ್ಲ ರಾಜಕೀಯ ಪಕ್ಷಗಳು ಸೇರಿ ಮಾಧ್ಯಮವು ಅವರಿಗೆ ಬೆಂಬಲವಾಗಿ ನಿಂತಿದೆ. ಬಡ, ಹಿಂದುಳಿದ ವರ್ಗದ ಯುವಕರು ಇದಕ್ಕೆ ಒಳಗಾಗಿದ್ದು, ಅವರೆಲ್ಲರನ್ನೂ ಹೊರಗೆ ತರಬೇಕು ಎಂದರು.  ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ಮಾತನಾಡಿ, ದ್ವೇಷವನ್ನು ಹರಡುವ ಮೂಲಕ ಇಡೀ ಕಲಹಗಳ ಮೇಲೆ ಸಾಮ್ರಾಜ್ಯಶಾಹಿ ಘೋರಿಗಳನ್ನು ಕಟ್ಟುವಂತಹ ಸಂಘಟನೆಗಳಿವೆ. ಅವುಗಳ ವಿರುದ್ಧ ಸೌಹಾರ್ದಯುತ ಚಳವಳಿಯನ್ನು ನಾವೆಲ್ಲರೂ ಪ್ರಯತ್ನ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಲಡಾಯಿ ಪ್ರಕಾಶನ ಈವರೆಗೆ ಕೆಲಸ ಮಾಡಿದೆ ಎಂದರು.  ಚಳವಳಿಯನ್ನು ನಿರಂತರವಾಗಿ ನಮ್ಮ ಪ್ರಕಾಶನ ಮಾಡುತ್ತಿದೆ. ಯಾವ ಸಂಘಟನೆಗಳ ಹೆದರಿಕೆಗೆ, ಬೆದರಿಕೆಗೆ ಬಗ್ಗುವಂತಹ ಜನರಲ್ಲ, ನಮ್ಮ ಹಿಂದೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವಿದೆ ಎಂದು ಅವರು ತಿಳಿಸಿದರು.  ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಮಹೇಂದ್ರ ಕುಮಾರ್ ಕುರಿತಾದ ಈ ಪುಸ್ತಕವನ್ನು ಎಲ್ಲ ಯುವಕರು ಓದಬೇಕು. ಓದುವ ಮೂಲಕ ಕೋಮುವಾದದ ವಿರುದ್ಧ ಹೋರಾಟಕ್ಕೆ ಸಿದ್ದರಾಗಬೇಕು ಎಂದರು.  ಯುವ ಮುಖಂಡ ನಿಕೇತ್ ರಾಜ್ ಮೌರ್ಯ ಮಾತನಾಡಿ, ಜನಪ್ರತಿನಿಧಿಗಳ ಮಕ್ಕಳು ಕೋಮುವಾದಿಗಳಾಗುತ್ತಿಲ್ಲ, ಬಡಕುಟುಂಬದಿಂದ ಬಂದ ಮಕ್ಕಳು, ಮಧ್ಯಮವರ್ಗದಿಂದ ಬಂದಂತಹ ಮಕ್ಕಳು ರಾಜಕಾರಣಿಗಳು ಹೇಳುವಂತಹ ಬಣ್ಣದ ಮಾತಿಗೆ ಬೆರಗಾಗುತ್ತಿದ್ದಾರೆ. ಅದು ದೇಶಸೇವೆ ಎಂದು ತಿಳಿದುಕೊಂಡು ಕೋಮುವಾದಿಗಳಾಗುತ್ತಿದ್ದಾರೆ ಎಂದರು.  ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಲೇಖಕ ನವೀನ್ ಸೂರಿಂಜೆ, ಚಿಂತಕ ಸುಧೀರ್ ಕುಮಾರ್ ಮರೊಳ್ಳಿ, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಲೇಖಕಿ ಎಂ.ಎಸ್. ಆಶಾದೇವಿ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಶಿಕ್ಷಣ ತಜ್ಞ ಶ್ರೀಪಾದ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  