ಬೆಂಗಳೂರು: ದಕ್ಷಿಣ ಭಾರತದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಸಂಘಟಿತವಾಗಿ ಇದನ್ನು ನಿಯಂತ್ರಿಸಲು ಮೂರು ದಕ್ಷಿಣ ರಾಜ್ಯಗಳ ನಡುವೆ ನಾಳೆ (ಮಾ.10) ಬಂಡೀಪುರದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದೆ.  ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಕೇರಳದ ಸಚಿವ ಎ.ಕೆ. ಶಶೀಂದ್ರನ್ ಈ ಸಭೆಯಲ್ಲಿ ಭಾಗಿಯಾಗಲಿದ್ದು, ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಉನ್ನತ ಅರಣ್ಯಾಧಿಕಾರಿಗಳೂ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಲಾಗಿದೆ.  ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಈ ಮೊದಲ ಅಂತಾರಾಜ್ಯ ಸಮನ್ವಯ ಸಮಿತಿ ಸಭೆ ಇದಾಗಿದ್ದು, ಮೂರೂ ರಾಜ್ಯಗಳ ನಡುವೆ ಅರಣ್ಯ ಸಂರಕ್ಷಣೆ, ಕಳ್ಳಬೇಟೆ, ಅರಣ್ಯ ನಾಶ, ವನ್ಯಜೀವಿಗಳ ಸಂಚಾರ ಕುರಿತಂತೆ ಮಾಹಿತಿಯ ವಿನಿಮಯ ಹಾಗೂ ಉತ್ತಮರೂಢಿ, ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯಕ್ಕೆ ಹಾಗೂ ನಿರಂತರ ಸಮನ್ವಯಕ್ಕೆ ನಾಂದಿ ಹಾಡಲಿದೆ ಎಂದು ನಿರೀಕ್ಷಿಸಲಾಗಿದೆ.   ನವೆಂಬರ್ ನಲ್ಲಿ ಹಾಸನ ಜಿಲ್ಲೆ ಬೇಲೂರು ಬಳಿ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ, ಬಂಡೀಪುರ ಅರಣ್ಯದಲ್ಲಿ ಬಿಡಲಾಗಿದ್ದ ‘ಮಖ್ನಾ’ ಎಂಬ ದಂತರಹಿತ ಗಂಡಾನೆ ಕಳೆದ ತಿಂಗಳು ಕೇರಳದ ವಯನಾಡು ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಅಂತಾರಾಜ್ಯ ಅರಣ್ಯ ಸಚಿವರ ಸಭೆ ನಡೆಸಿ ಪರಿಹಾರೋಪಾಯಗಳ ಕುರಿತಂತೆ ಮತ್ತು ಈ ನಿಟ್ಟಿನಲ್ಲಿ ಸಮನ್ವಯ ಸಾಧಿಸಲು ಚರ್ಚಿಸುವುದಾಗಿ ಪ್ರಕಟಿಸಿದ್ದರು.   ಈಶ್ವರ ಖಂಡ್ರೆ ಅವರ ಪ್ರಯತ್ನದಿಂದಾಗಿ ಸಚಿವರ ಮಟ್ಟದ ಈ ಸಭೆ ನಡೆಯುತ್ತಿದ್ದು, ಇದು ಅಂತಾರಾಜ್ಯ ಸಮನ್ವಯ ಮತ್ತು ವನ್ಯಜೀವಿ-ಮಾನವ ಸಂಘರ್ಷ ತಗ್ಗಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.  