ಬೆಂಗಳೂರು: ರಾಜ್ಯದಲ್ಲಿ ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಮತ್ತು ನಾನು ಪಾಲಿಸಿ ಮೇಕಿಂಗ್ ಸ್ಥಾನದಲ್ಲಿಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.ರಾಜ್ಯಮಟ್ಟದ ಎಸ್​ಸಿ, ಎಸ್​ಟಿ ನೌಕರರ ಸಮಾವೇಶದಲ್ಲಿ ಮಾತನಾಡಿದ ಅವರು, " ನೀವು ನಾಯಕರನ್ನು ಫಾಲೊ ಮಾಡುತ್ತಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರು ಯಾಕೆ ಮುಖ್ಯಮಂತ್ರಿ ಆದರು? ರಾಜ್ಯದಲ್ಲಿ ಒಗ್ಗಟಾಗಿ ಪಕ್ಷಕ್ಕೆ ಮತ ನೀಡಿದ ನಂತರವೂ ಸಿಎಂ ಸ್ಥಾನ ಕೊಡಿ ಎಂದು ಕೇಳುವ ಪರಿಸ್ಥಿತಿ ನಮ್ಮದಾಗಿದೆ. ಮತ ನಮ್ಮದಿದೆ, ನಾಯಕತ್ವ ಬೇರೆ ಯಾರ ಬಳಿಯೋ ಇದೆ. ಇದಕ್ಕೆ ನಾವು ನಮ್ಮ ನಾಯಕತ್ವ ಬೆಳೆಸದಿರುವುದೇ ಕಾರಣ" ಎಂದು ಹೇಳಿದರು.ಸಿದ್ದರಾಮಯ್ಯ ಹೇಗೆ ಸಿಎಂ ಆದರೂ ಎಂದು ವಿವರಿಸಿದ ಮಹಾದೇವಪ್ಪ ಅವರು, ಜಿ ಪರಮೇಶ್ವರ್, ಖರ್ಗೆ ಅವರಾಗಲಿ, ನಾನಾಗಲಿ ನೀತಿ ರೂಪಿಸುವ ಜಾಗದಲ್ಲಿಲ್ಲ. ನಾವು ಸಿಎಂ ಆಗಲಿಲ್ಲ. ಅಂಬೇಡ್ಕರ್ ನಂತರ  ಇನ್ನೊಬ್ಬ ದಲಿತ ನಾಯಕ ಸಿಗಲಿಲ್ಲ. ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ. ಆದರೂ ನಮ್ಮ ಪ್ರಭಾವ ಬಳಿಸಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ, ಮುಂಬಡ್ತಿ ಮೀಸಲಾತಿ ಸೇರಿದಂತೆ ಕೆಲ ಐತಿಹಾಸಿಕ ತೀರ್ಮಾನ ಮಾಡಿಸಿದ್ದೇವೆ. ಇದು ಇವತ್ತಿನ ದೇಶದ ರಾಜಕೀಯ ಸನ್ನಿವೇಶ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.1987 ರಲ್ಲಿ 27 ಜನ ದಲಿತ ಶಾಸಕರು ಇದ್ದರೂ ಬಿ.ರಾಚಯ್ಯನವರು ಮುಖ್ಯಮಂತ್ರಿ ಆಗಬೇಕು ಅಂತ ಹೇಳಿದವನು ನಾನೊಬ್ಬನೇ. ಉಳಿದ 26 ಜನ ದಲಿತ ಶಾಸಕರು ಸುಮ್ಮನೇ ಕೂತಿದ್ದರು. ಕೊನೇ ಪಕ್ಷ 26 ಜನರೂ ಎದ್ದಿದ್ದರೆ ನಾಯಕತ್ವ ರಕ್ಷಣೆ ಮಾಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.