ಬೆಂಗಳೂರು: ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಶಂಕಿತ ಆರೋಪಿಯ ಬಗ್ಗೆ ಕೆಲವು ಪ್ರಮುಖವಾದ ಕುರುಹುಗಳು ಸಿಕ್ಕಿದ್ದು, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಈವರೆಗಿನ ತನಿಖೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ವಿಚಾರಗಳನ್ನು ಚರ್ಚಿಸಲಾಗಿದೆ. ಆರೋಪಿ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪರಿಶೀಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.  ಎನ್‍ಐಎ, ಎನ್‍ಎಸ್‍ಜಿ ಅಧಿಕಾರಿಗಳು ಸಹ ತಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಬೆಂಗಳೂರು ನಗರದ ಜನತೆಗೆ ಮನವಿ ಮಾಡುತ್ತೇನೆ. ನಗರವನ್ನು ಸುರಕ್ಷಿತ ಮಾಡಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದೇವೆ ಎಂದು ಅವರು ನುಡಿದರು.  ಪೊಲೀಸರು ಗಸ್ತು ತಿರುಗುವುದು, ಸೂಕ್ಷ್ಮ ಚಲನವಲನಗಳ ಮೇಲೆ ನಿಗಾವಹಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚಿಸಿದ್ದೇನೆ. ತನಿಖೆಗೆ ತೊಂದರೆಯಾಗುವುದರಿಂದ ಟೆಕ್ನಿಕಲ್ ಮಾಹಿತಿಯನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ತಿಳಿಸಿದರು.  ಮತ್ತೊಂದೆಡೆ, ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟದ ರೀತಿಯಲ್ಲಿಯೇ ಈ ಪ್ರಕರಣದಲ್ಲಿಯೂ ಸ್ಪೋಟದ ವಸ್ತುಗಳನ್ನು ಜೋಡಿಸಿರುವ ತಾಂತ್ರಿಕ ಸಾಮ್ಯತೆ ಕಂಡು ಬರುತ್ತಿದೆ. ಬ್ಯಾಟರಿ ಬಳಕೆ, ಟೈಮರ್ ಇನ್ನಿತರ ಗಮನಿಸಿದರೆ ತಾಂತ್ರಿಕವಾಗಿ ಅದೇ ರೀತಿ ಜೋಡಿಸಿದ್ದಾರೆ. ಒಂದೇ ತರ ಕಾಣಿಸುತ್ತಿದೆ. ಇಂತಹದ್ದೇ ಸಂಘಟನೆಯವರು ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.  ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಊಹಾಪೋಹಾ ಹೇಳಿಕೆ ನೀಡುತ್ತಿದ್ದಾರೆ. ನಾನು ಎಲ್ಲರಿಗೂ ವಿನಂತಿ ಮಾಡುತ್ತೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು, ನಾನು ಅಥವಾ ಗೃಹ ಇಲಾಖೆಯ ಅಧಿಕಾರಿಗಳು ಹೇಳಿದರೆ ಮಾತ್ರ ಅಧಿಕೃತ ಮಾಹಿತಿಯೆಂದು ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು.  ಬಹಳ ಜನ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ಇಲ್ಲದೆ ಹೇಳಿಕೆ ನೀಡುತ್ತಿರುವುದರಿಂದ ಗೊಂದಲವಾಗುತ್ತಿದೆ. ಅವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಪತ್ರಕರ್ತರು ಹೋಗಿ ಕೇಳಿದಾಗ ಹೇಳಿರುತ್ತಾರೆ. ಅವರ ದೃಷ್ಟಿಕೋನದಲ್ಲಿ ಅವರು ಹೇಳಿರುತ್ತಾರೆ. ನಾವು ಹೇಳಿಕೆ ನೀಡುವಾಗ ಅನೇಕ ಮಾಹಿತಿಯನ್ನು ಇಟ್ಟುಕೊಂಡು ಹೇಳಿರುತ್ತೇವೆ ಎಂದರು.  ಸ್ಪೋಟದ ತೀವ್ರತೆ ಬಹಳ ಕಡಿಮೆ ಇರುವುದು ಪರೀಶೀಲನೆಯಲ್ಲಿ ಕಂಡು ಬಂದಿದೆ. ಹೀಗಾಗಿ ದೊಡ್ಡ ಅನಾಹುತ ಆಗಿಲ್ಲ. ಬಳಕೆಯಾದ ಸ್ಪೋಟಕ ವಸ್ತುಗಳು ಕಡಿಮೆ ಇರಬಹುದು. ಹೆಚ್ಚು ಬಳಕೆ ಮಾಡಿದ್ದರೆ ಸ್ಪೋಟದ ತೀವ್ರತೆ ಜಾಸ್ತಿ ಆಗುತ್ತಿತ್ತು ಎಂದು ತಿಳಿಸಿದರು.  ಕ್ಯಾಮೆರಾ ಪರಿಶೀಲನೆ: ಬೆಂಗಳೂರು ನಗರವನ್ನು ಸುರಕ್ಷಾ ನಗರ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಸರಕಾರ ಸುರಕ್ಷಾ ನಗರ ಮಾಡಿ ಬಹಳ ಹಣ ಖರ್ಚು ಮಾಡಿ, ಕ್ಯಾಮರಾ ಹಾಕಿದ್ದೇವೆ. ಕಮಾಂಡ್ ಸೆಂಟರ್ ಮಾಡಿ ಎಲ್ಲವನ್ನು ಮಾನಿಟರ್ ಮಾಡಲಾಗುತ್ತಿದೆ. ಬೆಂಗಳೂರು ಈಗ ಸುರಕ್ಷತೆಯಲ್ಲಿ ಎಷ್ಟೋ ಉತ್ತಮವಾಗಿದೆ. ಸ್ಥಳದ ಸುತ್ತ ಮುತ್ತಲಿನ 40ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸ್ಪೋಟದ ಸಂದರ್ಭದಲ್ಲಿ 26 ಬಸ್‍ಗಳು ಸಂಚರಿಸಿವೆ. 26 ಬಸ್‍ಗಳಲ್ಲಿನ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ತಾಂತ್ರಿಕ ವಿಚಾರಗಳ ಬಗ್ಗೆ ಹೇಳುವುದಿಲ್ಲ ಎಂದು ತಿಳಿಸಿದರು.  ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಗುಪ್ತಚರ ದಳದ ಎಡಿಜಿಪಿ ಶರತ್ ಚಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಸೇರಿದಂತೆ ನಗರದ ಎಲ್ಲ ವಿಭಾಗದ ಡಿಸಿಪಿಗಳು ಸಭೆಯಲ್ಲಿ ಹಾಜರಿದ್ದರು.