ಬೆಂಗಳೂರು: "ಕುಂಕುಮ ಬೇಡ ಎನ್ನುವ ಸಿದ್ದರಾಮಯ್ಯ ಹಿಂದೂನಾ?" ಎಂದು ಪ್ರಶ್ನಿಸಿದ್ದ ಬಿಜೆಪಿ ಮುಖಂಡ ಸಿಟಿ ರವಿಗೆ ತಿರುಗೇಟು ನೀಡಿರುವ ಕಾಂಗ್ರೆಸ್‌  “ಕುಂಕುಮ ಹಾಕಿಕೊಳ್ಳುವುದರಿಂದ ಯಾರೂ ಹಿಂದುವಾಗುವುದಿಲ್ಲ”ಎಂದು ಹೇಳಿದೆ.ಈ ಸಂಬಂದ ʼಎಕ್ಸ್‌ʼ ನಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, “ಸೋತು ಸುಣ್ಣವಾಗಿರುವ ಅಬ್ಬೆಪಾರಿ ಸಿಟಿ ರವಿ ಅವರೇ, ಕುಂಕುಮ ಹಾಕಿಕೊಳ್ಳುವುದರಿಂದ ಯಾರೂ ಹಿಂದುವಾಗುವುದಿಲ್ಲ. ಕೆಲವರು ಕುಂಕುಮ, ಕೆಲವರು ವಿಭೂತಿ, ಕೆಲವರು ಅಡ್ಡ ನಾಮ, ಕೆಲವರು ಉದ್ದ ನಾಮ, ಕೆಲವರು ಗಂಧ ಹಾಕಿಕೊಳ್ಳುತ್ತಾರೆ, ಇನ್ನೂ ಕೆಲವರು ಹಾಕಿಕೊಳ್ಳದೆಯೂ ಇರುತ್ತಾರೆ, ಅದು ಅವರವರ ವ್ಯಕ್ತಿಗತ ಆಯ್ಕೆ, ಸ್ವತಂತ್ರ.”ಎಂದು ಸ್ಪಷ್ಟಪಡಿಸಿದೆ.“ನೀವು ಬೇಕಿದ್ದರೆ ಕುಂಕುಮವಷ್ಟೇ ಅಲ್ಲ, ಕೈಬಳೆ, ಕಿವಿಯೋಲೆ, ಮೂಗುಬೊಟ್ಟು, ಡಾಬು, ವಂಕಿ, ಬೈತಲೆ ಬೊಟ್ಟು ಯಾವುದನ್ನು ಬೇಕಿದ್ದರೂ ಹಾಕಿಕೊಳ್ಳಿ,ಅದು ನಿಮ್ಮ ಸ್ವತಂತ್ರ”ಎಂದು ಲೇವಡಿ ಮಾಡಿದೆ. 