ಹಾವೇರಿ: ಪಕ್ಷವನ್ನು ತೊರೆದು ಹೋಗುವವರನ್ನು ತಡೆದು ನಿಲ್ಲಿಸಲು ಆಗುವುದಿಲ್ಲ. ಕಾಂಗ್ರೆಸ್‍ನಿಂದ ಬೇರೆ ಯಾರೂ ಹೋಗುತ್ತಾರೆಂದು ಹೇಳಲು ಸಾಧ್ಯವಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದೀಗ ಪಕ್ಷ ತೊರೆದಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.  ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಶೆಟ್ಟರ್ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆಂಬುದು ಅವರಿಗೆ ಬಿಟ್ಟಿರುವ ವಿಚಾರ. ಲಿಂಗಾಯತ ಸಮುದಾಯ ಯಾರಿಗೆ ಮತ ಹಾಕುತ್ತಾರೆಂಬುದು ಈಗಲೇ ಹೇಳಲು ಆಗದು ಎಂದರು.  ಪಕ್ಷ ದೊಡ್ಡದು: ಕಾಂಗ್ರೆಸ್ ಪಕ್ಷದಲ್ಲಿದ್ದವರು ಕಾಂಗ್ರೆಸ್‍ನಲ್ಲಿಯೇ ಇರುತ್ತಾರೆಂಬ ಆಶಾಭಾವನೆ ನಮಗಿದೆ. ಶೆಟ್ಟರ್ ಇನ್ನೂ ಸ್ವಲ್ಪ ದಿನ ಕಾಂಗ್ರೆಸ್‍ನಲ್ಲಿ ಇರಬೇಕಿತ್ತು. ಅವರು ಹೋಗಿದ್ದು ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರು ಬೆಳಗಾವಿಯಲ್ಲಿ ಸ್ಪರ್ಧಿಸಿದರೇ ಆ ವೇಳೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. ವ್ಯಕ್ತಿಗಿಂತ ಪಕ್ಷ ದೊಡ್ಡದು’ ಎಂದು ಅವರು ತಿಳಿಸಿದರು.   