Screengrab: facebook/FilmyFirstಬೆಂಗಳೂರು: ರಾಮಮಂದಿರದ ಬಾಲರಾಮ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ರನ್ನು ಹೊಗಳುವ ಭರದಲ್ಲಿ ಅವರೇ ಮಣಿಪಾಲದ ಕಾಯಿನ್‌ ಸರ್ಕಲ್‌ (ಉಪೇಂದ್ರ ಪೈ ಸ್ಮಾರಕ ವೃತ್ತ) ನ ಕಲಾಕೃತಿಯನ್ನು  ನಿರ್ಮಿಸಿದ್ದಾರೆ ಎಂದು ಹೇಳಿ ಕಾಂಗ್ರೆಸ್ ನಾಯಕಿ, ನಟಿ ಭಾವನ ರಾಮಣ್ಣ ಅವರು ನಗೆಪಾಟಲಿಗೀಡಾದ್ದಾರೆ.ಚಾನಲ್ ಒಂದರ ಜೊತೆ ಮಾತನಾಡಿದ ಭಾವನ ಅವರು, ಅಯೋಧ್ಯೆಯ ರಾಮ ಮಂದಿರದ ಬಗ್ಗೆ ವರದಿಗಾರ ಕೇಳಿದ ಪ್ರಶ್ನೆಗೆ  “ಊಟ ಇಲ್ಲ, ವ್ಯವಸ್ಥೆ ಇಲ್ಲ, ಇಲ್ಲಿಗೆ ಬರಬೇಡಿ ಎಂದರೂ ಕೋಟ್ಯಾಂತರ ಜನರು ರಾಮಜನ್ಮಭೂಮಿಗೆ ಏನು ಇಲ್ಲದೆ ಹೋಗುತ್ತಿದ್ದಾರೆ. ಇದು ಅಧ್ಬುತ. ಭಕ್ತಿ ರಸ ನಮ್ಮ ದೇಶ ಬಿಟ್ಟು ಬೇರೆ ಯಾವ ನೆಲದಲ್ಲೂ ಇಂತಹ ಭಕ್ತಿ ರಸ ಇಲ್ಲ, ಅದರ ಬಗ್ಗೆ ಮಾತಾಡುವಾಗಲೇ ನನಗೆ ರೋಮಾಂಚನವಾಗುತ್ತಿದೆ ” ಎಂದು  ಹೇಳಿದರು. ಅದರ ಬೆನ್ನಿಗೇ ವರದಿಗಾರ ರಾಮ ಮಂದಿರಕ್ಕೆ ರಾಜ್ಯದ ಕೊಡುಗೆ ಹಾಗು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮನ ವಿಗ್ರಹವೇ ಆಯ್ಕೆ ಆಗಿರುವ ಬಗ್ಗೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಭಾವನಾ "ಅರುಣ್ ಯೋಗಿರಾಜ್ ಬಗ್ಗೆ ಮಾತಾಡಲೇಬೇಕು. ನಾನು ಈ ಮೊದಲೇ ಅವರ ಕಲಾಕೃತಿಗಳನ್ನು ನೋಡಿದ್ದೇನೆ. ಮೈಸೂರು ಝೂ ನಲ್ಲಿ ʼಝೂʼ ಎಂದು ಸುಂದರವಾಗಿ ಕಲ್ಲಿನಲ್ಲಿ ಬಹು ಆಯಾಮದಲ್ಲಿ ಕೆತ್ತಿರುವುದು  ಅವರೇ. ಮತ್ತೆ  ಮಣಿಪಾಲದಲ್ಲಿನ ಕಾಯಿನ್ ಸರ್ಕಲ್ ನಲ್ಲಿ ನಾಣ್ಯಗಳ ಸುಂದರ ಕಲಾಕೃತಿ ಮಾಡಿದ್ದಾರೆ. ಅಲ್ಲಿ ಒಂದು ಪೈಸೆಯಿಂದ ಶುರು ಮಾಡಿ ಒಂದು, ಎರಡು, ಮೂರು ಹೀಗೆ ನಾಣ್ಯಗಳನ್ನು ಇಟ್ಟು ಕೊನೆಗೆ ಒಂದು ರೂಪಾಯಿಯ ನಾಣ್ಯದ ಕಲಾಕೃತಿ ಮಾಡಿದ್ದಾರೆ. ಅದು ಬಹಳ ಕಂಟೆಂಪರರಿ ಕಲೆ. ಆಮೇಲೆ ನಾನು ಅವರನ್ನು ಭೇಟಿಯಾದೆ. ಮಾತಾಡಿದೆ. ಅವರು ಬಹಳ ಸರಳ ವ್ಯಕ್ತಿ"  ಎಂದೆಲ್ಲ  ಭಾವನ ಹೇಳಿದ್ದಾರೆ.ಆದರೆ ವಾಸ್ತವದಲ್ಲಿ ಮಣಿಪಾಲದಲ್ಲಿನ ಕಾಯಿನ್ ಸರ್ಕಲ್ ನ ವಿಶಿಷ್ಟ ಕಲಾಕೃತಿ ನಿರ್ಮಿಸಿರುವುದು ಉಡುಪಿಯ ಅಂತರ್ ರಾಷ್ಟ್ರೀಯ ಖ್ಯಾತಿಯ ಕಲಾವಿದ  ಎಲ್. ಎನ್. ತಲ್ಲೂರು ಅವರು. ಇನ್ನು ಆ ಕಲಾಕೃತಿಯಲ್ಲಿ ಭಾವನಾ ಅವರು ಹೇಳಿದ ಕ್ರಮದಲ್ಲೂ ನಾಣ್ಯಗಳ ಆಕೃತಿಯನ್ನು ಜೋಡಿಸಲಾಗಿಲ್ಲ. ಭಾವನಾ ಅವರು ಹೇಳಿದ್ದಕ್ಕೆ ತದ್ವಿರುದ್ಧವಾಗಿ ಒಂದು ರೂಪಾಯಿ ನಾಣ್ಯದ ಆಕೃತಿ ಆ ಕಲಾಕೃತಿಯ ಬುಡದಲ್ಲಿದೆ. ಮೇಲಿಲ್ಲ.ಭಾವನಾ ಅವರು ತಪ್ಪು ಮಾಹಿತಿ ನೀಡಿರುವ  ಬಗ್ಗೆ ಕಾಯಿನ್ ಕಲಾಕೃತಿ ಮಾಡಿರುವ ಕಲಾವಿದ ಎಲ್ ಎನ್ ತಲ್ಲೂರು ಅವರ ಸೋದರ, ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.ಭಾವನಾ ಅವರ ಈ ತಪ್ಪು ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. “ಅರ್ಧ ಬೆಂದವುಗಳು. ಮೈಸೂರು ಝಾವಿನಲ್ಲಿರುವುದು ಮತ್ತು ಮಣಿಪಾಲದ್ದು ನೋಡಿ ಕಲಾವಿದರತ್ರ ಮಾತಾಡಿದ್ದಾರಂತೆ. ಅವರಾದರೂ ಹೇಳಿಲ್ವಾ.” ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. “ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇವರು. ಅಯ್ಯೋ ಕಾಂಗ್ರೆಸ್ ನಲ್ಲಿ ಇತ್ತೀಚಿಗೆ ಇಂತವರ ಸಂಖ್ಯೆ ಅಧಿಕವಾಗುತ್ತಿದೆ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ.  ಭಾವನಾ ಅವರು 2018ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಚಿತ್ರದುರ್ಗದಲ್ಲಿ ಟಿಕೆಟ್ ಬಯಸಿದ್ದರು. ಆದರೆ ಟಿಕೆಟ್ ಸಿಗದ ಕಾರಣ ವಿಧಾನಸಭೆ ಚುನಾವಣೆಗೆ ಎರಡು ದಿನಗಳು ಇರುವಾಗ ಪಕ್ಷ ತೊರೆದು ಬಿಜೆಪಿ ಸೇರಿದ್ದರು. 2021ರಲ್ಲಿ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. 